
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.29: ವಿಜ್ಞಾನ ಹಾಗೂ ಧರ್ಮ ಕುವೆಂಪು ಅವರ ಸಾಹಿತ್ಯದ ವೈಚಾರಿಕೆಯಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸಿ. ಕೊಟ್ರೇಶ ಹೇಳಿದರು.
ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಬುಧುವಾರ ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕ ಹಾಗೂ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ವಿಭಾಗದ ಸಂಯುಕ್ತ ಆಶ್ರಯದಲ್ಲಿ ‘ದಿ. ಕೆ. ವಿ. ತಿರುಪಾಲಪ್ಪ ಸ್ಮಾರಕ ದತ್ತಿ ಕಾರ್ಯಕ್ರಮ’ದಡಿಯಲ್ಲಿ ‘ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕುವೆಂಪು ರಚಿಸಿದ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಸರ್ವೋದಯ ತತ್ವವಿದೆ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುವದರ ಮೂಲಕ ಸಮನ್ವಯ ಮತ್ತು ಪೂರ್ಣದೃಷ್ಠಿಯ ಹರಿಕಾರರಾಗಿದ್ದಾರೆ. ಅವರ ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಠಿಕೋನವನ್ನು ಎಲ್ಲರೂ ಅನುಸರಿಸಬೇಕು. ವೈದಿಕತೆ, ವಸಾಹತುಶಾಹಿ, ರಾಜಪ್ರಭುತ್ವ, ಜಾತೀಯತೆ, ಮತಾಂಧತೆ, ಮೌಢ್ಯತೆಯ ವಿರುದ್ದ ನಿರಂತರ ಹೋರಾಟ ಮಾಡಿದವರು. ಮುನುಜು ಮತ ವಿಶ್ವ ಪಥ, ಸರ್ವೋದಯ ಪೂರ್ಣ ದೃಷ್ಟಿ ಸಮನ್ವಯತೆ ಕುವೆಂಪು ಅವರ ಸಾಹಿತ್ಯದ ಮೂಲಕ ಕೊಟ್ಟ ದರ್ಶನಗಳಾಗಿವೆ. ಇವುಗಳನ್ನು ಅರಗಿಸಿಕೊಂಡು ಬೆಳೆದಷ್ಟು ಕನ್ನಡ ಸಾಹಿತ್ಯ ಹೆಚ್ಚು ಶ್ರೀಮಂತವಾಗುತ್ತದೆ ಎಂದು ಹೇಳಿದರು.
ವಿವಿಯ ಅಕ್ಯಾಡೆಮಿಕ್ ಕೌನ್ಸಿಲ್‍ನ ಮಾಜಿ ಸದಸ್ಯರಾದ ವೆಂಕಟೇಶ ಹೆಗಡೆ ಮಾತನಾಡಿ, ಬಳ್ಳಾರಿ ಜಿಲ್ಲೆಯು ಹಲವಾರು ಫ್ರಭಾವಿ ನಾಯಕರಿಗೆ ಜನ್ಮ ನೀಡಿದೆ. ಮಾಜಿ ಸಂಸದ ಕೆ. ಸಿ. ಕೊಂಡಯ್ಯ ಇಂದಿರಾ ಗಾಂಧಿಯವರನ್ನು ಚುನಾವಣೆಗೆ ನಿಲ್ಲಿಸುವ ಮೂಲಕ ಬಳ್ಳಾರಿಯನ್ನು ದೇಶಕ್ಕೆ ಪರಿಚಯಿಸಿದರು. ಹೈದ್ರಾಬಾದ್ ಕರ್ನಾಟಕದಲ್ಲಿ ಉದ್ಯೋಗ ಪಡೆಯುವಲ್ಲಿ ವಿಶ್ರೀಕೃ ವಿಶ್ವವಿದ್ಯಾಲಯ ಪ್ರಮುಖವಾಗಿದೆ ಎಂದರು.
ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಾ. ನಿಷ್ಠಿ ರುದ್ರಪ್ಪ ಮಾಡನಾಡಿ, ಕನ್ನಡ ಸಾಹಿತ್ಯ ಪರಿಷತ್ ಹಲವಾರು ವರ್ಷಗಳ ಇತಿಹಾಸ ಹೊಂದಿದೆ. ಅಖಿಲ ಭಾರತ ಸಮ್ಮೇಳನ ಕನ್ನಡ ಸಾಹಿತ್ಯಯವನ್ನು ನೆನಪು ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಅಯೋಜಿಸಲಾಗುತ್ತಿದೆ. ಈ ಸಮ್ಮೇಳನಕ್ಕೆ ವಿಶ್ವವಿದ್ಯಾಲಯವು ಸಹಕರಿಸಲಿದೆ ಹೇಳಿದರು.
ಕಾರ್ಯಕ್ರಮದ ಉದ್ಘಾಟಕರಾದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎಂ.ಮುನಿರಾಜು ಮಾತನಾಡಿ, ಕುವೆಂಪು ಅವರು ಯಾವುದೇ ಅಧಿಕಾರ ಸ್ಥಾನಮಾನಕ್ಕೆ ಆಸೆ ಪಟ್ಟಿರಲಿಲ್ಲ. ವಿದ್ಯಾರ್ಥಿಗಳು ಅವರಂತೆ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು. ಹೈದರಾಬಾದ್ ಕರ್ನಾಟಕದಲ್ಲಿ ಪೊಷಕರು ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಬೇಕು. ಮುಂಬರುವ ದಿನಗಳಲ್ಲಿ ದಿ. ಕೆ. ವಿ. ತಿರುಪಾಲಪ್ಪ ಸ್ಮಾರಕ ಕನ್ನಡ ಭವನ ನಿರ್ಮಾಣ ಮಾಡುವುದಾಗಿ ಹೇಳಿದರು.
.ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ವಿವಿಯ ಸಿಂಡಿಕೇಟ್ ಮಾಜಿ ಸದಸ್ಯರಾದ ಜಯಪ್ರಕಾಶ್ ಗೌಡ, ಕಲಾ ನಿಕಾಯದ ಡೀನರಾದ ಪ್ರೊ. ಎನ್ ಶಾಂತಾನಾಯ್ಕ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರೊ. ರಾಬರ್ಟ ಜೋಷ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಕೆ. ಸಂತೋಷ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ವಿವಿಯ ಕನ್ನಡ ಅಧ್ಯಯನ ವಿಭಾಗದ ಉಪನ್ಯಾಸಕರಾದ ಡಾ. ಕೆ. ಎಸ್ ಶಿವಪ್ರಕಾಶ ನಿರೂಪಿಸಿದರು. ಡಾ. ರಂಗನಾಥ ಎನ್ ವಂದಿಸಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.