
ಕಲಬುರಗಿ:ಮೇ.20: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಲು ಪರಿಶಿಷ್ಟ ಜಾತಿಗಳಲ್ಲಿ (ಎಸ್‍ಸಿ) ಆಂತರಿಕ ಮೀಸಲಾತಿಯ ಬೇಡಿಕೆಗಳನ್ನು ಪರಿಹರಿಸಲು ಸರ್ಕಾರ ಪರಿಶಿಷ್ಟ ಒಳ ಮೀಸಲಾತಿ ಸಮೀಕ್ಷೆ ನಡೆಸುತ್ತಿದ್ದು, ಜಿಲ್ಲೆಯ ಜನತೆ https://schedulecastesurvey.karnataka.gov.in/selfdeclaration ಲಿಂಕ್ ಮೂಲಕ ಸ್ವಯಂ ಘೋಷಣೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮನವಿ ಮಾಡಿದ್ದಾರೆ.
ಮೇ 19 ರಿಂದ 25ರ ವರೆಗೆ ಅನ್ ಲೈನ್ ಮೂಲಕ ಮಾಹಿತಿ ಸಲ್ಲಿಸಲು ಅವಕಾಶ ನೀಡಿದ್ದು, ಆನ್ ಲೈನ್ ನೋಂದಣಿಗೆ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆ ಅವಶ್ಯಕವಾಗಿರುತ್ತದೆ. ಜಿಲ್ಲೆಯ ಪರಿಶಿಷ್ಟ ಜಾತಿಯ ಸಮುದಾಯ ನಿಗಧಿತ ಅವಧಿಯಲ್ಲಿ ಮಾಹಿತಿ ಸಲ್ಲಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯಲ್ಲಿ ಭಾಗವಹಿಸಬೇಕೆಂದು ಅವರು ಕೋರಿದ್ದಾರೆ.
ನ್ಯಾಯಯುತ ಒಳ ಮೀಸಲಾತಿ ಹಂಚಿಕೆಗಾಗಿ ಸರ್ಕಾರ ನ್ಯಾಯಮೂರ್ತಿ ಡಾ. ಹೆಚ್.ಎನ್.ನಾಗಮೋಹನ ದಾಸ್ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚಿಸಿದ್ದು, ಸರ್ಕಾರದ ಮಹತ್ವಾಕಾಂಕ್ಷೆಯ ದಿಟ್ಟ ಹೆಜ್ಜೆಯಾಗಿದೆ. ಪರಿಶಿಷ್ಟ ಜಾತಿಗೆ ಸೇರಿದವರು ತಮ್ಮ ಮೂಲ ಜಾತಿ, ಶಿಕ್ಷಣ, ವರಮಾನ, ಉದ್ಯೋಗ ಮತ್ತು ಇನ್ನಿತರ ನಿಖರ ಮಾಹಿತಿ ನೀಡುವ ಮೂಲಕ ಸಮೀಕ್ಷಾ ಕಾರ್ಯಕ್ಕೆ ಸಹಕರಿಸಬೇಕೆಂದು ತಿಳಿಸಿದ್ದಾರೆ.
ಇನ್ನು ತಮ್ಮ ಜಾತಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದಾದಲ್ಲಿ ಮೂಲ ಜಾತಿ ನಮೂದಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.