
ನವದೆಹಲಿ, ಮಾ.೨೪: ಪರಿಶಿಷ್ಟ ಸಮುದಾಯದವರು ಹಿಂದೂ, ಬೌದ್ಧ ಅಥವಾ ಸಿಖ್ ಧರ್ಮಗಳನ್ನು ಹೊರತುಪಡಿಸಿ ಇತರ ಧರ್ಮಗಳಿಗೆ ಮತಾಂತರವಾದರೆ “ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂಕೋರ್ಟ್ ಇಂದು ಸ್ಪಷ್ಟಪಡಿಸಿದೆ. ಈ ಸಂಬಂಧ ಆಂಧ್ರಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಈ ಮೂಲಕ ಧರ್ಮಾಂತರಗೊಂಡ ಕ್ರೈಸ್ತರು ಎಸ್‌ಸಿ ಹಕ್ಕುಗಳನ್ನು ಅಥವಾ ಎಸ್‌ಸಿ/ಎಸ್‌ಟಿ (ಅತ್ಯಾಚಾರ ತಡೆ) ಕಾಯ್ದೆಯ ರಕ್ಷಣೆಯನ್ನು ಬೇಡಿಕೊಳ್ಳಲು ಸಾಧ್ಯವಿಲ್ಲವೆಂದು ನ್ಯಾಯಾಲಯ ತೀರ್ಪು ನೀಡಿದೆ.
ಆಂಧ್ರ ಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ಮಾನ್ಯಗೊಳಿಸಿದ ಸುಪ್ರೀಂ ಕೋರ್ಟ್, “೧೯೫೦ರ ಸಂವಿಧಾನ (ಪರಿಶಿಷ್ಟ ಜಾತಿ) ಆದೇಶದ ಉಪನಿಯಮ ೩ ಪ್ರಕಾರ, ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಅನುಸರಿಸುವವರಿಗಷ್ಟೇ ಪರಿಶಿಷ್ಟ ಜಾತಿ ಸ್ಥಾನಮಾನ ಅನ್ವಯಿಸುತ್ತದೆ. ಇತರ ಧರ್ಮಗಳಿಗೆ ಮತಾಂತರವಾದ ಕ್ಷಣದಿಂದಲೇ ಆ ವ್ಯಕ್ತಿ ಎಸ್‌ಸಿ ಹುದ್ದೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾನೆ” ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನಮೋಹನ್ ಅವರಿದ್ದ ಪೀಠ, “ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ಬೇರೆ ಧರ್ಮವನ್ನು ಅನುಸರಿಸುತ್ತಾ, ಪರಿಶಿಷ್ಟ ಜಾತಿಗೆ ಸೇರಿದವನೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಸಂವಿಧಾನ ಮತ್ತು ಕಾನೂನುಗಳ ಅಡಿಯಲ್ಲಿ ದೊರೆಯುವ ಯಾವುದೇ ಸೌಲಭ್ಯ, ಮೀಸಲಾತಿ ಅಥವಾ ರಕ್ಷಣೆಯನ್ನು ಇಂತಹ ವ್ಯಕ್ತಿಗೆ ನೀಡಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ
ಈ ಪ್ರಕರಣದಲ್ಲಿ ದೂರುದಾರನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಪಾಸ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರೂ, ತನ್ನ ಮೇಲೆ ನಡೆದ ದಾಳಿಯ ಕುರಿತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದನು. ಆರೋಪಿಗಳು ಇದನ್ನು ಪ್ರಶ್ನಿಸಿ, “ಕ್ರೈಸ್ತ ಧರ್ಮಕ್ಕೆ ಮತಾಂತರವಾದ ವ್ಯಕ್ತಿಗೆ ಎಸ್‌ಸಿ ಹಕ್ಕು ಅನ್ವಯಿಸುವುದಿಲ್ಲ” ಎಂದು ವಾದಿಸಿದ್ದರು.
ಆಂಧ್ರ ಪ್ರದೇಶ ಹೈಕೋರ್ಟ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿ, ಕ್ರೈಸ್ತ ಧರ್ಮದಲ್ಲಿ ಜಾತಿ ವ್ಯವಸ್ಥೆಗೆ ಸ್ಥಾನವಿಲ್ಲ ಎಂದು ಹೇಳಿ ಪ್ರಕರಣವನ್ನು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಸುಪ್ರೀಂ ಕೋರ್ಟ್ ಅಭಿಪ್ರಾಯ
ಸುಪ್ರೀಂ ಕೋರ್ಟ್ ಗಮನಿಸಿದಂತೆ, ಸಂಬಂಧಿತ ವ್ಯಕ್ತಿ ಮತ್ತೆ ತನ್ನ ಮೂಲ ಧರ್ಮಕ್ಕೆ ಮರಳಿಲ್ಲ ಹಾಗೂ ಕ್ರೈಸ್ತ ಧರ್ಮವನ್ನು ಸಕ್ರಿಯವಾಗಿ ಅನುಸರಿಸುತ್ತಿದ್ದಾನೆ. “ಪಾಸ್ಟರ್ ಆಗಿ ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವುದು, ನಿಯಮಿತವಾಗಿ ಪ್ರಾರ್ಥನೆಗಳನ್ನು ನಡೆಸಿರುವುದು ಅವನು ಕ್ರೈಸ್ತನೆಂಬುದನ್ನು ಸ್ಪಷ್ಟಪಡಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಜಾತಿ ಪ್ರಮಾಣಪತ್ರ ಕುರಿತು ಸ್ಪಷ್ಟನೆ
ವ್ಯಕ್ತಿಯ ಬಳಿ ಇನ್ನೂ ಜಾತಿ ಪ್ರಮಾಣಪತ್ರ ಇರುವುದರಿಂದ ಎಸ್‌ಸಿ ಹಕ್ಕು ಸಿಗಬೇಕು ಎಂಬ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿದೆ. “ಪ್ರಮಾಣಪತ್ರ ರದ್ದುಪಡಿಸದಿರುವುದರಿಂದ ಮಾತ್ರ ಕಾನೂನುಬದ್ಧ ಹಕ್ಕು ದೊರೆಯುವುದಿಲ್ಲ. ಅದು ಪ್ರತ್ಯೇಕ ಪ್ರಕ್ರಿಯೆಯಲ್ಲಿ ಪರಿಶೀಲಿಸಬೇಕಾದ ವಿಷಯ” ಎಂದು ನ್ಯಾಯಾಲಯ ಹೇಳಿದೆ.
ಧರ್ಮಾಂತರದಿಂದ ಎಸ್‌ಸಿ ಸ್ಥಾನಮಾನ ತಕ್ಷಣ ಕಳೆದುಹೋಗುತ್ತದೆಕ್ರೈಸ್ತ ಅಥವಾ ಇತರ ಧರ್ಮಸ್ಥರಿಗೆ ಎಸ್‌ಸಿ ಕಾಯ್ದೆಯ ರಕ್ಷಣೆ ಅನ್ವಯಿಸುವುದಿಲ್ಲಜಾತಿ ಪ್ರಮಾಣಪತ್ರ ಇದ್ದರೂ ಹಕ್ಕು ದೊರೆಯುವುದಿಲ್ಲ೧೯೫೦ರ ಸಂವಿಧಾನ ಆದೇಶದಲ್ಲಿ ಈ ನಿಯಮ ಸ್ಪಷ್ಟವಾಗಿದೆ
ಈ ತೀರ್ಪು ದೇಶದಾದ್ಯಂತ ಧರ್ಮಾಂತರ ಮತ್ತು ಮೀಸಲಾತಿ ಹಕ್ಕುಗಳ ಬಗ್ಗೆ ಮಹತ್ವದ ಕಾನೂನು ಸ್ಪಷ್ಟತೆ ನೀಡುವಂತಾಗಿದೆ.
























