ಐತಿಹಾಸಿಕ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಉಳಿಸಿ – ಸೀತಾರಾಮ್ ಗುಂಡಪ್ಪ ಆಗ್ರಹ

ಬೆಂಗಳೂರು,ಜೂ೧೫: ನಗರಕ್ಕೆ ಅತ್ಯಂತ ಸಮೀಪದಲ್ಲಿರುವ ತಿಪ್ಪಗೊಂಡನಹಳ್ಳಿ ( ಟಿಜಿಹಳ್ಳಿ) ಜಲಾಶಯಕ್ಕೆ ಭೇಟಿ ನೀಡಿದ ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಜಲಾಶಯದ ೧೦ ಕಿ.ಮೀ ವ್ಯಾಪ್ತಿಯಲ್ಲಿ ನಗರೀಕರಣ ಮತ್ತು ಕೈಗಾರಿಕೀಕರಣವನ್ನು ನಿಯಂತ್ರಿಸಲು ಸಂರಕ್ಷಣಾ ವಲಯವೆಂದು ಗುರುತಿಸಿದೆ. ಆದರೂ ಸಹ ಜಲಾಶಯವು ಅನೇಕ ವರ್ಷಗಳಿಂದ ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆ, ಕೈಗಾರಿಕೆಗಳ ತ್ಯಾಜ್ಯ ವಿಸರ್ಜನೆ, ಬೆಂಗಳೂರಿನ ಒಳಚರಂಡಿ ಹರಿವು, ಅನುಚಿತ ಘನ ತ್ಯಾಜ್ಯ ವಿಲೇವಾರಿ, ನೀಲಗಿರಿ ಏಕ ಸಂಸ್ಕೃತಿ, ತೆರೆದ ಪಿಟ್ ಕ್ವಾರಿಗಳಂತಹ ಅನೇಕ ನೈಸರ್ಗಿಕ ವಿರೋಧಿ ಕೃತ್ಯಗಳ ಪರಿಣಾಮಗಳಿಂದಾಗಿ ಈ ಜಲಾಶಯವು ಅಪಾಯದ ಅಂಚಿನಲ್ಲಿದೆ.


೧೯೩೩ರಲ್ಲಿ ಅರ್ಕಾವತಿ ನದಿಗೆ ಅಣೆಕಟ್ಟು ಕಟ್ಟಿ ೧.೦೭ ಟಿಎಂಸಿ ಸಂಗ್ರಹ ಸಾಮರ್ಥ್ಯದ ಈ ಜಲಾಶಯವು ಬೆಂಗಳೂರಿನ ಅರ್ಧ ಭಾಗಕ್ಕೆ ನೀರನ್ನು ಪೂರೈಸುತ್ತಿತ್ತು.
ಇತ್ತೀಚೆಗೆ ಅರಣ್ಯ ಸಚಿವರು ಜಲಾಶಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಬಫರ್ ವಲಯವನ್ನು ೫೦೦ ಮೀಟರ್ ಗಳಿಂದ ಕೇವಲ ೩೦ ಮೀಟರ್ ಗೆ ಇಳಿಸಲಾಗುತ್ತದೆ ಎಂಬ ಸರ್ಕಾರದ ನಿರ್ಣಯವನ್ನು ತಿಳಿಸಿದರು. ಇದು ನಿಜಕ್ಕೂ ಕಳವಳಕಾರಿಯಾದಂತಹ ಸಂಗತಿ. ಇದರಿಂದ ಜಲಾಶಯವು ಇನ್ನಷ್ಟು ಕಲುಷಿತವಾಗಿ ಮತ್ತು ಅಕ್ಕಪಕ್ಕದ ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗುತ್ತದೆ. ಈಗಾಗಲೇ ನೈಸರ್ಗಿಕ ನದಿ ಹರಿವಿನ ನಷ್ಟವನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಮಳೆ ನೀರಿನ ಒಳಹರಿವು ಕಡಿಮೆಯಾಗುವುದು ಹಾಗೂ ಸ್ಥಳೀಯ ಜೀವವೈವಿಧ್ಯತೆಗೆ ಧಕ್ಕೆಯಾಗುತ್ತದೆ.


ಈ ಕೂಡಲೇ ಅರ್ಕಾವತಿ ನದಿಯನ್ನು ಪುನಶ್ಚೇತನ ಗೊಳಿಸಬೇಕು. ಯಾವುದೇ ಕಾರಣಕ್ಕೂ ಟಿ.ಜಿ.ಹಳ್ಳಿ ಜಲಾಶಯದ ಬಫರ್ ವಲಯವನ್ನು ಕಡಿಮೆ ಮಾಡಬಾರದು. ಆಮ್ ಆದ್ಮಿ ಪಕ್ಷವು ಹಾಗೂ ಸ್ಥಳೀಯ ರೈತರುಗಳು,ಪರಿಸರ ಹೋರಾಟ ಸಮಿತಿಗಳ ಜೊತೆಗೂಡಿ ಸರ್ಕಾರದ ಈ ರಿಯಲ್ ಎಸ್ಟೇಟ್ ಲಾಭಿಯನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರವು ಬಫರ್ ವಲಯವನ್ನು ತಗ್ಗಿಸುವಂತಹ ಪರಿಸರ ವಿರೋಧಿ ಕಾರ್ಯಗಳಿಗೆ ಕೈ ಹಾಕಬಾರದೆಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದರು.


ಪಕ್ಷದ ನಿಯೋಗದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಶಶಿಧರ್ ಆರಾಧ್ಯ, ರಾಜ್ಯ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರುಗಳಾದ ಪ್ರಸನ್ನ, ಶಾಂತ ಮೋಹನ್, ಕಾರ್ತಿಕ್, ಶಾಂತ ಪ್ರಕಾಶ್ ಮನಮ್, ಪಳನಿ ಸುಬ್ರಹ್ಮಣ್ಯ ಮುಂತಾದ ಮುಖಂಡರುಗಳು ಭಾಗವಹಿಸಿದ್ದರು.