
ಯಾದಗಿರಿ:ಮಾ.11: ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೊಂದು ಆಗಿರುವ ಕೇಂದ್ರ ನಾಗರಿಕ ಸೇವಾ ಪರೀಕ್ಷೆ ಯಲ್ಲಿ 82ನೇ ರ್ಯಾಂಕ್ ಪಡೆದು ಯಾದಗಿರಿ ಜಿಲ್ಲೆಯ ಹೆಮ್ಮೆ ಹೆಚ್ಚಿಸಿದ ಪ್ರತಿಭಾವಂತ ಯುವಕ ಸಂದೀಪ್ ಬಾಡದ್ ಅವರನ್ನು ಮಂಗಳವಾರ ಯಾದಗಿರಿ ವಿಧಾನಸಭಾ ಕ್ಷೇತ್ರದ ಯುವ ಮುಖಂಡರು ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಮಹೇಶರಡ್ಡಿ ವೆಂಕಟರಡ್ಡಿ ಮುದ್ನಾಳ ಅವರು ಅವರ ಸ್ವಗೃಹಕ್ಕೆ ಭೇಟಿ ನೀಡಿ ಭಾವಪೂರ್ಣವಾಗಿ ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹೇಶರಡ್ಡಿ ಮುದ್ನಾಳ ಅವರು, ಸಂದೀಪ್ ಬಾಡದ್ ಅವರ ಪರಿಶ್ರಮ, ದೃಢ ಸಂಕಲ್ಪ ಮತ್ತು ನಿರಂತರ ಅಧ್ಯಯನದ ಫಲವಾಗಿ ಈ ಅಪೂರ್ವ ಸಾಧನೆ ಸಾಧ್ಯವಾಗಿದೆ. ಅವರ ಸಾಧನೆ ಯಾದಗಿರಿ ಜಿಲ್ಲೆಯ ಯುವಕರಿಗೆ ಸ್ಪೂರ್ತಿದಾಯಕವಾಗಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಉನ್ನತ ಗುರಿಗಳನ್ನು ಸಾಧಿಸಲು ಪ್ರೇರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಜೊತೆಗೆ ಸಂದೀಪ್ ಅವರ ತಂದೆ-ತಾಯಿಯವರನ್ನೂ ಗೌರವಪೂರ್ವಕವಾಗಿ ಸತ್ಕರಿಸಿ ಅವರ ತ್ಯಾಗ ಮತ್ತು ಮಾರ್ಗದರ್ಶನವನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಬಸವರಾಜ ಸೊನ್ನದ್, ಹಿರಿಯ ಮುಖಂಡರಾದ ಶ್ರೀ ಭೀಮರಾಯಗೌಡ ಪೆÇೀ. ಪಾಟೀಲ, ಶ್ರೀ ಶಿವಕುಮಾರ ಅರುಣಿ, ಶ್ರೀ ರಮೇಶ್ ದೊಡ್ಡಮನಿ, ಶ್ರೀ ರಾಜಶೇಖರಯ್ಯ ಸ್ವಾಮಿ, ಶ್ರೀನಾಥ ಜೈನ್, ಶ್ರೀ ವಿಜಯ ಪಾಟೀಲ್ ಸೇರಿದಂತೆ ಹಲವು ಗಣ್ಯರು, ಕಾರ್ಯಕರ್ತರು ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದು ಸಾಧಕನಿಗೆ ಶುಭಾಶಯಗಳನ್ನು ತಿಳಿಸಿದರು.
ಸಂದೀಪ್ ಬಾಡದ್ ಅವರ ಈ ಮಹತ್ವದ ಸಾಧನೆಗೆ ಜಿಲ್ಲೆಯ ವಿವಿಧ ಸಂಘಟನೆಗಳು, ಸಾರ್ವಜನಿಕರು ಮತ್ತು ಯುವಜನರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.






















