ಸಾಹೇ ವಿವಿ ಘಟಿಕೋತ್ಸವ ಜಪಾನಂದಜೀ, ಡಾ. ರೆಡ್ಡಿಗೆ ಗೌಡಾ, ೧೦೮೬ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ತುಮಕೂರು, ನ. ೨೨- ಕಲ್ಪತರುನಾಡಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಾಹೇ (ಶ್ರೀ ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಷನ್) ವಿಶ್ವವಿದ್ಯಾಲಯದ ೧೪ನೇ ಘಟಿಕೋತ್ಸವ ವಿಜೃಂಭಣೆಯಿಂದ ನಡೆಯಿತು.


ನಗರದ ಅಗಲಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಹೆಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದ ಆವರಣದಲ್ಲಿ ನಡೆದ ಸಾಹೇ ವಿಶ್ವವಿದ್ಯಾಲಯದ ೧೪ನೇ ಘಟಿಕೋತ್ಸವದಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಎಂಸಿಎ, ಎಂಟೆಕ್, ಪಿಎಚ್.ಡಿ ಸೇರಿದಂತೆ ಒಟ್ಟು ೧೦೮೬ ವಿದ್ಯಾರ್ಥಿಗಳಿಗೆ ವಿವಿಯ ಕುಲಾಧಿಪತಿಗಳಾದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪದವಿ ಪ್ರದಾನ ಮಾಡಿದರು.


ಹಾಗೆಯೇ ವೈದ್ಯಕೀಯದಲ್ಲಿ ೩, ದಂತ ವೈದ್ಯಕೀಯದಲ್ಲಿ ೨, ಇಂಜಿನಿಯರಿಂಗ್‌ನಲ್ಲಿ ೮, ಎಂಸಿಎ ಮತ್ತು ಎಂಟೆಕ್ ೨ ಸೇರಿ ಒಟ್ಟು ೧೫ ಮಂದಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಯಿತು.


ಗೌಡಾ ಪ್ರದಾನ

೧೪ನೇ ಸಾಹೇ ಘಟಿಕೋತ್ಸವದ ಪ್ರಮುಖ ಕೇಂದ್ರ ಬಿಂದುವಾಗಿದ್ದ ಪಾವಗಡದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಸ್ಥಾಪಕರಾದ ಶ್ರೀ ಸ್ವಾಮಿ ಜಪಾನಂದಜಿ ಮಹಾರಾಜ್ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಏರೋಸ್ಪೇಸ್ ಇಂಜಿನಿಯರಿಂಗ್‌ನ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಕೆ.ಪಿ.ಜೆ.ರೆಡ್ಡಿ ಅವರಿಗೆ ವಿವಿಯ ಕುಲಾಧಿಪತಿಗಳಾದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದರು.


ಹಾಗೆಯೇ ಡಾಕ್ಟರೇಟ್ ಪದವಿ-೧೪, ಇಂಜಿನಿಯರಿಂಗ್-೬೬೪, ವೈದ್ಯಕೀಯ-೩೭೨, ದಂತ ವೈದ್ಯಕೀಯ-೩೪ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಹಾಗೂ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಇಂಜಿನಿಯರಿಂಗ್-೦೧, ವೈದ್ಯಕೀಯ-೦೧ ಹಾಗೂ ದಂತ ವೈದ್ಯಕೀಯ-೦೧ ವಿದ್ಯಾರ್ಥಿಗೆ ಪದವಿ ಪ್ರದಾನ ಮಾಡಿ ಗೃಹ ಸಚಿವರು ಪ್ರೋತ್ಸಾಹಿಸಿದರು.


ಚಿನ್ನದ ಪದಕ ಪಡೆದವರ ಸಂಭ್ರಮ
ಟಿ. ಬೇಗೂರಿನ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ತನುಷ್ಠ ಕೀರ್ತಿ, ಡಾ. ಕಾಂಚನ ಯು.ಸಿಂಗ್, ದಂತ ವೈದ್ಯಕೀಯದಲ್ಲಿ ಡಾ. ಇಂಪನ ಬಿ. ವರ್ಧನ್, ಡಾ. ಸೈಯದ್ ಸರ್ಪ್ರೋಜ್ ಅಹಮದ್, ಸಂಯೋಜಿತ ಆರೋಗ್ಯ ಸೇವಾ ವಿಭಾಗದಲ್ಲಿ ಉಮ್ಮೆ ಸೌಧ, ಇಂಜಿನಿಯರಿಂಗ್‌ನಲ್ಲಿ ಸಿಂಧೂ ರಾಣಿ (ಕಂಪ್ಯೂಟರ್ ಸೈನ್ಸ್), ಪ್ರವೀಣ್ ಡಿ.ಎಂ. (ಸಿವಿಲ್), ನಮ್ರತಾ ಎಸ್. (ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್), ಸುಮನ್ ಬಿ.ಎಸ್. (ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್), ಗಾನ್ವಿ ಎಂ.ಎಸ್. (ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್), ಕೀರ್ತನ ಎಚ್.ಎನ್. (ಇನ್ಫರ್ಮೇಷನ್ ಸೈನ್ಸ್), ವಿನೋದ ಜಿ. (ಮೆಕಾನಿಕಲ್ ಇಂಜಿನಿಯರಿಂಗ್) ಹಾಗೂ ಸುಷ್ಮಾ ಮಂಜುನಾಥ್ (ಮೆಡಿಕಲ್ ಎಲೆಕ್ಟ್ರಾನಿಕ್ಸ್, ಎಂಟೆಕ್‌ನಲ್ಲಿ ವಿಂಧ್ಯಾ ಎ.ಎಸ್, ಎಂಸಿಎನಲ್ಲಿ ಭಾವನ ಅವರು ಚಿನ್ನದ ಪದಕ ಪಡೆದು ಸಂಭ್ರಮಿಸಿದರು.