ನಾಳೆ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ

ಬೆಂಗಳೂರು, ಮೇ ೧೯- ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಾಳೆ ೨ ವರ್ಷ ಪೂರೈಸಿ, ೩ನೇ ವರ್ಷಕ್ಕೆ ಕಾಲಿರಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ೨ ವರ್ಷದ ಸಂಭ್ರಮದ ಸಾಧನಾ ಸಮಾವೇಶ ನಾಳೆ ಹೊಸಪೇಟೆಯಲ್ಲಿ ನಡೆಯಲಿದೆ.


ಕಾಂಗ್ರೆಸ್‌ನ ಈ ಸಾಧನಾ ಸಮಾವೇಶವನ್ನು ಯಶಸ್ವಿಗೊಳಿಸಲು ಸಿದ್ದತೆಗಳು ಭರದಿಂದ ನಡೆದಿದ್ದು, ಈ ಸಮಾವೇಶಕ್ಕೆ ಸಮರ್ಪಣೆ, ಸಂಕಲ್ಪ ಸಮಾವೇಶ ಎಂದು ಹೆಸರಿಲಾಗಿದೆ.


ಸರ್ಕಾರದ ೨ ವರ್ಷಗಳ ಸಾಧನೆಯ ಸಮರ್ಪಣೆ, ಸಂಕಲ್ಪ ಸಮಾವೇಶದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಎಲ್ಲ ಸಚಿವರು, ಕಾಂಗ್ರೆಸ್‌ನ ಶಾಸಕರುಗಳು, ಸಂಸದರುಗಳು ಪಾಲ್ಗೊಳ್ಳುವರು.


ನಾಲ್ಕು ಲಕ್ಷ ಜನರ ಆಗಮನ ನಿರೀಕ್ಷೆ
ಈ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ೪ ಲಕ್ಷ ಜನ ಆಗಮಿಸುವ ನಿರೀಕ್ಷೆಯಿದ್ದು, ಈ ಸಮಾವೇಶದಲ್ಲಿ ರಾಜ್ಯದ ಗ್ಯಾರಂಟಿ ಯೋಜನೆಯ ೧ ಲಕ್ಷ ಫಲಾನುಭವಿಗಳು ಪಾಲ್ಗೊಳ್ಳುವರು.


ಕಾಂಗ್ರೆಸ್‌ನ ಈ ಸಾಧನೆಯ ಸಮಾವೇಶಕ್ಕಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದ್ದು, ವೇದಿಕೆಯ ಉದ್ದ ೭೦ ಅಡಿ, ಅಗಲ ೨೦೦ ಅಡಿ ಇರಲಿದೆ.


ಈ ಸಮಾವೇಶದಲ್ಲಿ ೧.೫ ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ ಬರುವವರಿಗೆ ಊಟ, ಉಪಚಾರದ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಮಾವೇಶದಲ್ಲಿ ಪಾಲ್ಗೊಳ್ಳುವರಿಗೆ ಕುಡಿಯುವ ನೀರು, ಮಜ್ಜಿಗೆ ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿದ್ದು, ಸುಮಾರು ೫ ಲಕ್ಷ ಪ್ಯಾಕೆಟ್ ನೀರು, ೩ ಲಕ್ಷ ಪ್ಯಾಕೆಟ್ ಮಜ್ಜಿಗೆ, ೨.೫೦ ಲಕ್ಷ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.


ಸಮಾವೇಶ ನಡೆಯುವ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಧಾನ ವೇದಿಕೆಯ ಅಕ್ಕಪಕ್ಕ ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಸಮಾವೇಶದ ಪ್ರಧಾನ ವೇದಿಕೆಗೆ ಜರ್ಮನ್ ಟೆಂಟ್ ಹಾಕಲಾಗಿದೆ. ಪ್ರಧಾನ ವೇದಿಕೆಯಲ್ಲಿ ೩೦೦ ಜನ ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಇದು ೨ನೇ ಸಿದ್ದರಾಮೋತ್ಸವ ಆಗಲಿದೆ ಎಂದು ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.


ದೆಹಲಿಯಿಂದ ನೇರವಾಗಿ ರಾಹುಲ್ ಆಗಮನ
ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್‌ನ ವರಿಷ್ಠ ನಾಯಕರಾದ ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೇವಾಲಾ ಇವರುಗಳು ದೆಹಲಿಯಿಂದಲೇ ವಿಶೇಷ ವಿಮಾನದ ಮೂಲಕ ಬಳ್ಳಾರಿಗೆ ಆಗಮಿಸಿ, ಅಲ್ಲಿಂದ ಹೊಸಪೇಟೆಗೆ ಹೆಲಿಕಾಪ್ಟರ್‌ನಲ್ಲಿ ಬರುವರು.


ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಬೆಳಿಗ್ಗೆ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಹೊಸಪೇಟೆಗೆ ತೆರಳುವರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಹೊಸಪೇಟೆಯಲ್ಲೇ ಮೊಕ್ಕಾಂ ಹೂಡಿದ್ದು, ಸಮಾವೇಶದ ಸಿದ್ದತೆಗಳ ಪರಿಶೀಲನೆಯನ್ನು ನಡೆಸಿದ್ದಾರೆ. ಉಳಿದಂತೆ ಎಲ್ಲ ಸಚಿವರು, ಶಾಸಕರುಗಳು ನಾಳೆ ಹೊಸಪೇಟೆಗೆ ಆಗಮಿಸುವರು.