ತ್ಯಾಗ ಶಿರೋಮಣಿ ಭೀಷ್ಮಾಚಾರ್ಯರು

ಸತ್ತೂರು,ಜ26: ವರುಣ ದೇವರ ಅವತಾರರಾದ, ಚಕ್ರವರ್ತಿ ಶಂತನು ಹಾಗೂ ಗಂಗಾ ಮಾತೆಯರ ಎಂಟನೇ ಸುಪುತ್ರರಾದ ಭೀಷ್ಮಾಚಾರ್ಯರು. ಇವರ ಮೊದಲನೇ ನಾಮ `ದೇವ ವೃತ’ ಇವರು 50 ವರ್ಷಗಳ ಕಾಲ ಬೃಹಸ್ಪತ್ಯಚಾರ್ಯರಲ್ಲಿ ವೇದ ಅಧ್ಯಯನ, ಸಾಕ್ಷಾತ ನಾರಾಯಣ ಅವತಾರವಾದ ಶ್ರೀ ಪರುಶುರಾಮ ದೇವರಲ್ಲಿ 50 ವರ್ಷಗಳ ಹರಿತತ್ವ ಹಾಗೂ 25 ವರ್ಷಗಳ ಅಸ್ತ್ರ ವಿದ್ಯೆಯನ್ನು ಸಂಪಾದಿಸಿದ್ದಾರೆ. ಮಹಾಭಾರತ ಕಥೆಯ ಆದಿಯಿಂದ ಅಂತ್ಯದವರೆಗೆ ಕಥಾ ಸೂತ್ರರಾಗಿ ಬರುವ ಕೆಲವೇ ಪಾತ್ರಗಳಲ್ಲಿ ಭೀಷ್ಮಾಚಾರ್ಯರ ಸ್ಥಾನ ಬಹು ಮುಖ್ಯ. ತ್ಯಾಗಿಗಳಲ್ಲಿ ಶಿರೋಮಣಿ, ಜ್ಞಾನಿಗಳಲ್ಲಿ ವಿದ್ಯುನ್ಮಣಿ, ಶಸ್ತ್ರ, ಶಾಸ್ತ್ರ, ಕೌಶಲ್ಯ ತೋರಿಸಿದ ಮಹಾನುಭಾವರು ಎಂದು ಪಂ. ಕೃಷ್ಣಆಚಾರ್ಯ ಕಲ್ಮಂಗಿಯವರು ತಿಳಿಸಿದರು.

ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ವನಸಿರಿ ನಗರದಲ್ಲಿರುವ ಶ್ರೀ ವಾದಿರಾಜ ಲಕ್ಷ್ಮೇಶ್ವರ ಇವರ ನಿವಾಸದಲ್ಲಿ ನಡೆದ ಮಹಾಭಾರತದಲ್ಲಿ “ಭೀಷ್ಮಾಚಾರ್ಯರ ಪಾತ್ರ” ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಾ, ತಾನು ವಿವಾಹ ಮಾಡಿಕೊಳ್ಳದೆ, ತಂದೆಗೆ ಇನ್ನೊಂದು ಮದುವೆ ಮಾಡಿದ ಪುಣ್ಯಾತ್ಮ, ಜೀವನ ಪರ್ಯಂತ, ಬ್ರಹ್ಮಚರ್ಯ ಪಾಲಿಸುವ ಭಯಂಕರ, ಕಠಿಣವಾದ ಪ್ರತಿಜ್ಞೆಯನ್ನು ಮಾಡಿ ಭೀಷ್ಮ ಎಂಬ ನಾಮ ದೇಹವನ್ನು ಪಡೆದ ವ್ಯಕ್ತಿ. ತ್ಯಾಗದಲ್ಲಿ ಶಿರೋಮಣಿ, ಇಚ್ಛಾಮರಣಿ ಭೀಷ್ಮಾಚಾರ್ಯರು. ಇವರು ಪ್ರಾಣ ತ್ಯಾಗ ಮಾಡಿದ ಪರಮ ಪುಣ್ಯ ದಿನ `ಭೀಷ್ಮಾಷ್ಟಮಿ ‘ ದಿನದಂದು ನಾವೆಲ್ಲರೂ ತರ್ಪಣ ಕೊಡುವದರಿಂದ ನಮ್ಮ ಪಾಪಗಳ ವಿಮೋಚನೆಯ ಜೊತೆಗೆ ಸತ್ಸಂತಾನ ಪ್ರಾಪ್ತಿಯಾಗುತ್ತದೆ ಎಂದು ವಿಶ್ಲೇಷಿಸಿದರು.