
ನಾಳೆ ಅಂತ್ಯಕ್ರಿಯೆ
ಬೆಂಗಳೂರು, ಮೇ ೧೦- ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ (೬೨) ಇಂದು ಮುಂಜಾನೆ ನಿಧನರಾದರು.
ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.
ಕೆಲ ದಿನಗಳ ಹಿಂದೆ ಮಂಡಿ ಚಿಪ್ಪು ಶಸ್ತ್ರಚಿಕಿತ್ಸೆಗಾಗಿ ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಶ್ವಾಸಕೋಶದ ಸೋಂಕು ಇರುವುದು ಪತ್ತೆಯಾಗಿತ್ತು. ನಂತರ ಅವರನ್ನು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಸತತ ಚಿಕಿತ್ಸೆಯ ನಂತರವೂ ಅವರು ಚೇತರಿಸಿಕೊಂಡಿರಲಿಲ್ಲ. ಕೃತಕ ಉಸಿರಾಟದಲ್ಲೇ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಳಿಗ್ಗೆ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಸಚಿವ ಡಿ. ಸುಧಾಕರ್ ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
ಸುಧಾಕರ್ ರಾಜಕೀಯ ಜೀವನ
ಚಿತ್ರದುರ್ಗದ ಚಳ್ಳಕೆರೆಯವರಾದ ಡಿ. ಸುಧಾಕರ್ ಉದ್ಯಮಿಯಾಗಿದ್ದು, ಇವರ ಚಿಕ್ಕಪ್ಪ ಎಸ್. ಜಯಣ್ಣ ಅವರು ಚಳ್ಳಕೆರೆಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಜಯಣ್ಣನವರ ನಂತರ ಡಿ. ಸುಧಾಕರ್ ಅವರು ರಾಜಕೀಯ ರಂಗ ಪ್ರವೇಶಿಸಿ ೨೦೦೪ ರಲ್ಲಿ ಪ್ರಥಮ ಬಾರಿಗೆ ಚಳ್ಳಕೆರೆಯಿಂದ ಶಾಸಕರಾಗಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು. ಕ್ಷೇತ್ರ ವಿಂಗಡಣೆಯ ಬಳಿಕ ಚಳ್ಳಕೆರೆ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕಾರಣ ಅವರು ಹಿರಿಯೂರು ಕ್ಷೇತ್ರಕ್ಕೆ ವಲಸೆ ಬಂದು ೨೦೦೮ ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಜಯಗಳಿಸಿದ್ದರು.
ನಂತರ ಅವರು ಬಿಜೆಪಿ ಯಡಿಯೂರಪ್ಪ ಸರ್ಕಾರಕ್ಕೆ ಬೆಂಬಲ ನೀಡಿ ಯಡಿಯೂರಪ್ಪ ಸಂಪುಟದಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
೨೦೧೩ರ ಚುನಾವಣೆಯಲ್ಲಿ ಹಿರಿಯೂರಿನಿಂದಲೇ ಅವರು ಕಾಂಗ್ರೆಸ್ ಟಿಕೆಟ್ ಮೇಲೆ ವಿಧಾನಸಭೆಗೆ ಪುನರ್ ಆಯ್ಕೆಯಾಗಿದ್ದರು.
೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಸುಧಾಕರ್ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದ ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಸೋಲು ಅನುಭವಿಸಿದರು. ೨೦೨೩ರ ಚುನಾವಣೆಯಲ್ಲಿ ಮತ್ತೆ ಹಿರಿಯೂರಿನಿಂದ ಗೆದ್ದ ಡಿ. ಸುಧಾಕರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿ ನಿಯುಕ್ತಿಗೊಂಡಿದ್ದರು.
ಜೈನ ಸಮುದಾಯಕ್ಕೆ ಸೇರಿದ್ದ ಸುಧಾಕರ್ ಅವರು ಎಲ್ಲಾ ಸಮುದಾಯದವರ ಪ್ರೀತಿಗೆ ಪಾತ್ರರಾಗಿ ೪ ಬಾರಿ ವಿಧಾನಸಭೆ ಪ್ರವೇಶಿಸಿದ್ದರು. ಸುಧಾಕರ್ ಅವರು ಸಹಕಾರ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದು, ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅಧಿಕಾರ ಇರಲಿ, ಇಲ್ಲದಿರಲಿ ಬಡ ಜನರಿಗೆ ಸದಾ ನೆರವಿನ ಹಸ್ತ ಚಾಚುತ್ತಿದ್ದ ಡಿ. ಸುಧಾಕರ್ ಅವರು ಬಡವರ ಬಂಧು ಎಂದೇ ಹೆಸರಾಗಿದ್ದರು.
ನಾಳೆ ಅಂತ್ಯಕ್ರಿಯೆ
ಇಂದು ಮುಂಜಾನೆ ನಿಧನರಾಗಿರುವ ಸಚಿವ ಡಿ. ಸುಧಾಕರ್ ಅವರ ಅಂತ್ಯಕ್ರಿಯೆ ನಾಳೆ ಚಳ್ಳಕೆರೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.
ಇಂದು ಅವರ ಪಾರ್ಥೀವ ಶರೀರವನ್ನು ಹಿರಿಯೂರಿಗೆ ಕೊಂಡೊಯ್ದು ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಹಿರಿಯೂರಿನಿಂದ ಅವರ ಪಾರ್ಥೀವ ಶರೀರವನ್ನು ಚಳ್ಳಕೆರೆಯ ಸ್ವಗೃಹಕ್ಕೆ ಕೊಂಡೊಯ್ದು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಚಳ್ಳಕೆರೆಯಲ್ಲಿ ನಾಳೆ ಮಧ್ಯಾಹ್ನದ ವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ನಾಳೆ ಮಧ್ಯಾಹ್ನ ೩ ರಿಂದ ೪ ಗಂಟೆಯೊಳಗೆ ಸಚಿವ ಸುಧಾಕರ್ ರವರ ಅಂತ್ಯಕ್ರಿಯೆ ಚಳ್ಳಕೆರೆಯಲ್ಲಿ ನೆರವೇರಲಿದೆ.
ಸಿಎಂ ಸೇರಿ ಗಣ್ಯರ ಸಂತಾಪ
ಸಚವ ಡಿ. ಸುಧಾಕರ್ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕರುಗಳಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸೇರಿದಂತೆ ಎಲ್ಲಾ ಸಚಿವರು, ಶಾಸಕರು ಶೋಕ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು, ಗಣ್ಯರು ಬೆಳಿಗ್ಗೆಯೇ ಆಸ್ಪತ್ರೆಗೆ ತೆರಳಿ ಅವರ ಪಾರ್ಥೀವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.
ಸಂತಾಪ
ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವರು ಮತ್ತು ಚಿತ್ರದುರ್ಗದ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ನಿದನಕ್ಕೆ ವಿಧಾನ ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ಡಾ. ಟಿ.ಎ. ಶರವಣ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಸ್ಥರಿಗೆ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.




























