ಭಕ್ತರ ಬಾಳು ಬೆಳಗಿದ ಸಚ್ಚಿದಾನಂದ ಮಹಾರಾಜ

ಬೀದರ್: ಡಿ.5:ಸದ್ಗುರು ಸಚ್ಚಿದಾನಂದ ಮಹಾರಾಜರು ಭಕ್ತರ ಬಾಳು ಬೆಳಗಿದ್ದರು ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ, ದೇಗಲಮಡಿ ಹಾಗೂ ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಬಣ್ಣಿಸಿದರು.
ತಾಲ್ಲೂಕಿನ ಕಾಶೆಂಪೂರ(ಪಿ) ಗ್ರಾಮದಲ್ಲಿ ಬುಧವಾರ ಸದ್ಗುರು ಸಚ್ಚಿದಾನಂದ ಮಹಾರಾಜರ 9ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪವಾಡ ಪುರುಷರಾಗಿದ್ದ ಅವರು ಭಕ್ತರಿಗೆ ಸನ್ಮಾರ್ಗ ತೋರುತ್ತಿದ್ದರು. ತಮ್ಮ ಬಳಿ ಬಂದ ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿದ್ದರು ಎಂದು ನುಡಿದರು.
ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಗಾಗಿ ದೇವರ ಸನ್ನಿಧಿ ಮೋರೆ ಹೋಗಬೇಕು. ಸಂತರು, ಮಹಾತ್ಮರ ಮಾರ್ಗ ಅನುಸರಿಸಬೇಕು. ಆಧ್ಯಾತ್ಮವನ್ನು ಅರಿಯಬೇಕು ಎಂದು ತಿಳಿಸಿದರು.
ಜೀವನ ಬಹಳ ಚಿಕ್ಕದ್ದಾಗಿದೆ. ಕಾರಣ, ಪರಿಸ್ಪರ ಪ್ರೀತಿ, ವಿಶ್ವಾಸ, ಸೌಹಾರ್ದ, ಸಮಾಧಾನದಿಂದ ಬದುಕು ಸಾಗಿಸಬೇಕು. ಬಡತನ ಇದ್ದರೂ ಪ್ರೀತಿಗೆ ಬರವಿಲ್ಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಗುರು ಹಿರಿಯರನ್ನು ಸದಾ ಕಾಲ ಗೌರವಿಸಬೇಕು. ಜನ್ಮ ಕೊಟ್ಟ ತಾಯಿ, ತಾಯಿ ಸೇವೆ ಮಾಡಬೇಕು ಎಂದು ತಿಳಿಸಿದರು.
ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಮಾತನಾಡಿ, ಕಾಶೆಂಪುರ(ಪಿ) ಗ್ರಾಮ ಬಹಳ ವಿಶೇಷವಾಗಿದೆ. ಈ ಗ್ರಾಮದಲ್ಲಿ ಜನಿಸಿದವರು ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಹಾಗೂ ಗಣ್ಯ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿದರು.
ಡಾ. ಬಸವಲಿಂಗ ಅವಧೂತರು ಸರಳ ಸಂತರಾಗಿದ್ದಾರೆ. ಜನರಿಗೆ ಆಧ್ಯಾತ್ಮದ ಸವಿ ಉಣಬಡಿಸುತ್ತಿದ್ದಾರೆ. ಜನರಿಗೆ ಅರ್ಥವಾಗುವ ರೀತಿಯಲ್ಲಿ ಪ್ರವಚನ ನೀಡುವುದರಿಂದ ಅವರ ಪ್ರವಚನಗಳು ಬಹಳ ಪ್ರಭಾವ ಬೀರುತ್ತವೆ ಎಂದು ತಿಳಿಸಿದರು
ಬಸವರಾಜ ಮುತ್ತ್ಯಾ, ಪ್ರಮುಖರಾದ ಸುನೀಲ್ ಗುಮಾಸ್ತಿ, ಸತೀಶ್ ಮೆಕ್ಯಾನಿಕ್, ಸಂಜು ಗುಮಾಸ್ತಿ, ಸಂಜು ತಮಗೊಂಡ, ವಿಶ್ವನಾಥ ಬಾಲೆಬಾಯಿ, ರಾಜಕುಮಾರ ಶಿವಗೊಂಡ, ರವಿ ಗುಮಾಸ್ತಿ ಮತ್ತಿತರರು ಇದ್ದರು.