
ಬೀದರ,ನ.6: ನಗರದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಎಸ್.ಎಂ.ಜನವಾಡಕರ ಅವರ ಬದುಕು ಬರಹ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಿದ್ಧಾರ್ಥ ಪ.ಪೂ.ಕಾಲೇಜಿನ ಪ್ರಾಚಾರ್ಯ ಡಾ.ಎಸ್. ಪ್ರಭು ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆ ಯಾಗಿದ್ದು, ಅದನ್ನು ಹೆಚ್ಚಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ವಿದ್ಯಾರ್ಥಿಗಳು ಮೊಬೈಲ್‍ನ್ನು ಬಿಟ್ಟು ಪುಸ್ತಕಗಳನ್ನು ಓದಬೇಕು, ಇತರೆ ಸಾಹಿತಿಗಳ ಬಗ್ಗೆ ಮಾಹಿತಿ ಮಾಡಿಕೊಳ್ಳಬೇಕು ಎಂದರು. ಮುಖ್ಯ ಅತಿಥಿ ಕಥೆÉಗಾರ ಗುರುನಾಥ ಅಕ್ಕಣ್ಣ ಮಾತನಾಡುತ್ತಾ ಕತೆ, ಕಾವ್ಯ, ಹಾಸ್ಯ ಪ್ರಬಂಧ ಎಲ್ಲಾ ಸಾಹಿತ್ಯಗಳನ್ನು ತಿಳಿದುಕೊಳ್ಳಬೇಕು ಸಾಹಿತ್ಯದ ಗಂಧವನ್ನು ಮಕ್ಕಳಿಗೆ ಉಣಬಡಿಸಬೇಕು. ಆಡಂಬರವನ್ನು ನಿಲ್ಲಿಸಿ ಸಾಹಿತಿಗಳ ಸಾಹಿತ್ಯವನ್ನು ಓದುವಂತೆ ಅರ್ಥಮಾಡಿಕೊಳ್ಳಬೇಕೆಂದು ನುಡಿದರು. ಚುಟುಕು ಸಾಹಿತಿ ಪುಷ್ಪ ಕನಕ ಚುಟುಕುಗಳ ಮೂಲಕ ಹಾಸ್ಯವನ್ನು ಮಕ್ಕಳಿಗೆ ಉಣಬಡಿಸುತ್ತ ಗುರುವಂದನೆಯನ್ನು ಸಲ್ಲಿಸಿದರು. ಗುರುಗಳ ಬಗ್ಗೆ ಗೌರವದ ಮಾತನಾಡಿ ಇಂತಹ ಗುರುಗಳಿಂದ ಉನ್ನತ ಸ್ಥಾನಕ್ಕೆ ಬಂದಿರುವ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದರು. ಯುವ ಸಾಹಿತಿ ಪವನ ಬಾಲೇರ ಎಸ್.ಎಂ ಜನವಾಡಕರ ಅವರ ಬಗ್ಗೆ ಉಪನ್ಯಾಸವನ್ನು ಮಂಡಿಸಿ, ಅವರು ಬರೆದ ಕೃತಿಗಳ ಬಗ್ಗೆ ವಿಶ್ಲೇಷಣೆಯನ್ನು ಮಾಡಿದರು. ಅತಿಥಿಗಳಾಗಿ ನಾಗಶೆಟ್ಟಿ ಜ್ಯೋತೆಪ್ಪಾ ಮತ್ತು ಗುಂಡಪ್ಪ ಕನಕ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ ಶಬನಮ ಸಂಸ್ಥೆಯ ಡಾ. ಮಕ್ತುಂಬಿಯವರು ಮಾತನಾಡುತ್ತಾ ಸಾಹಿತಿಗಳ ಬಗ್ಗೆ ಪ್ರತಿ ತಿಂಗಳು ಎರಡು ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಪ್ರತಿಯೊಬ್ಬ ಸಾಹಿತಿಗಳ ಬಗ್ಗೆ ಯುವಜನರಿಗೆ ತಿಳಿಸುವ ಪ್ರಯತ್ನ ನಮ್ಮ ಸಂಸ್ಥೆ ಮಾಡುತ್ತಿದ್ದು, ಇದನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು.ಕಶೀಷ ಪ್ರಾರ್ಥನೆ ನಡೆಸಿಕೊಟ್ಟರು. ಸುಲೋಚನಾ ನಿರೂಪಿಸಿದರು. ಏಕನಾಥ ಸ್ವಾಗತಿಸಿದರು. ಪ್ರಿಯಾಂಕ ವಂದಿಸಿದರು
























