
ಬಾಗಲಕೋಟೆ,ಮೇ29: ಗ್ರಾಮೀಣ ಸೊಗಡೆ ಕನ್ನಡ ನಾಟಕಗಳ ಜೀವಾಳವಾಗಿದೆ ಎಂದು ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿ ಹಾಗೂ ನಾಟಕ ವಿಭಾಗದ ಮುಖ್ಯಸ್ಥರಾದ ಡಾ.ವೀರೇಶ ಬಡಿಗೇರ ಹೇಳಿದರು.
ಅವರು ನವನಗರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಟಕ ವಿಭಾಗ, ಗುಳೆದಗುಡ್ಡದ ರಾಷ್ಟ್ರೀಯ ಸಂಶೋಧನಾ ವೇದಿಕೆ, ಇವರುಗಳÀ ಸಹಯೋಗದಲ್ಲಿ “ಕನ್ನಡ ನಾಟಕಗಳ ವಿಭಿನ್ನ ನೆಲೆಗಳು” ಕುರಿತು ಒಂದು ದಿನದ ರಾಜ್ಯಮಟ್ಟದ ಸಂಶೋಧನಾ ಕಮ್ಮಟವನ್ನು ಸಸಿಗೆ ನಿರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಕನ್ನಡ ನಾಟಕಗಳ ಕಥಾವಸ್ತುವಿಗೆ ಮೂಲ ಬೇರು ಸಿಗುವುದು ನಮ್ಮ ಗ್ರಾಮೀಣ ಭಾಗದ ಜನ ಸಮುದಾಯದ ನಿತ್ಯದ ಸಂಹವನ, ಸಂಭಾಷಣೆ, ಹಾವ ಭಾವಗಳ ಅನುಕರಣೆ ಮೂಲಕ ನೆಲೆ ಕಂಡುಕೊಂಡದ್ದಾಗಿದೆ, ಈ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸಿದಾಗ ಕನ್ನಡ ನಾಟಕ ಕ್ಷೇತ್ರಕ್ಕೆ ಸಂಬಂದಿಸಿದಂತೆ ನಟನೆ ಮತ್ತು ಅಭಿನಯಕ್ಕೆ ಸೂಕ್ಷ್ಮವಾದ ವ್ಯತ್ಯಾಸವನ್ನು ಗುರುತಿಸಬಹುದಾಗಿದೆ, ಒಬ್ಬರು ಹೇಳಿದಂತೆ ನಟಿಸುವುದು ನಟನೆಯಾದರೆ, ಅನುಭವಿಸಿ ಅಭಿವ್ಯಕ್ತಿಸುವುದು ಅಭಿನಯವಾಗಿದೆ, ಅಭಿನಯದ ಮೂಲಕ ಅಭಿವ್ಯಕ್ತಿಗೊಂಡ ಕಲೆಯೇ ನಾಟಕವೆನಿಸಿಕೊಳ್ಳುತ್ತದೆ ಎಂದರು.
ರಾಷ್ಟೀಯ ಸಂಶೋಧನಾ ವೇದಿಕೆಯ ಗೌರವಾಧ್ಯಕ್ಷರಾದ ಡಾ.ಸಂಗಮೇಶ ಕಲ್ಯಾಣಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಸಮಾಜದ ಏರುಪೇರುಗಳನ್ನು ತಿದ್ದುವ, ತಿಳುವಳಿಕೆ ನೀಡುವ, ಅರಿವು ಮೂಡಿಸುವ ವಿಷಯಗಳ ಮೇಲೆ ನಾಟಕ ರಚನೆ, ಅಭಿನಯ, ಅನುಭವಗಳ ಮಾತು ಎಲ್ಲವೂ ಬೇಕಾಗುತ್ತದೆ. ಹಳಗನ್ನಡದ ಚಂಪೂ ಕಾವ್ಯಗಳನ್ನು ಓದಿದರೆ ಹತ್ತಾರು ಕನ್ನಡ ನಾಟಕಗಳನ್ನು ಬರೆಯಬಹುದು, ನಾಟಕ ರಚನೆಯಲ್ಲಿ ಹೆಚ್ಚು ಅನುಭವ ಮುಖ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಅರುಣಕುಮಾರ ಗಾಳಿ ಮಾತನಾಡಿ, ಕನ್ನಡ ನಾಟಕ ಪರಂಪರೆ ಶ್ರೀಮಂತವಾಗಿದೆ. ನಮ್ಮ ನವನಗರ ಕಾಲೇಜಿನಲ್ಲಿ ಆಯೋಜಿಸಿದ ರಾಜ್ಯಮಟ್ಟದ ಸಂಶೋಧನಾ ಕಮ್ಮಟದ ವಿಷಯವು ಪದವಿ ವಿದ್ಯಾರ್ಥಿಗಳಿಗೆ ಪಠ್ಯ ಇದ್ದ ಕಾರಣ ನಾಡಿನ ಅನೇಕ ಸಂಪನ್ಮೂಲ ವ್ಯಕ್ತಿಗಳನ್ನು ಆಮಂತ್ರಿಸಿ, ಕುವೆಂಪು ಅವರ ಶೂದ್ರ ತಪಸ್ವಿ, ಕಂಬಾರ ಅವರ ಶಿವರಾತ್ರಿ ಹಾಗೂ ಕಾರ್ನಾಡ ಅವರ ತಲೆದಂಡ ನಾಟಕಗಳ ವಸ್ತು ಅವುಗಳ ಮಹತ್ವ ತಿಳಿಸುವ ಉದ್ದೇಶವಾಗಿದೆ. ಇದರಿಂದ ನಮ್ಮ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲವಾಗಿದೆ ಎಂದರು.
ಕನ್ನಡ ವಿಭಾದ ಸಹ ಪ್ರಾಧ್ಯಾಪಕರಾದ ಡಾ.ಜಿಜಿ.ಹಿರೇಮಠ ಪ್ರಸ್ತಾವಿಕ ಮಾತನಾಡಿ, ಕನ್ನಡ ನಾಟಕಗಳ ವಿಭಿನ್ನ ನೆಲೆಗಳ ಕುರಿತಾಗಿ ನಡೆದ ಸಂಶೋಧನಾ ಕಮ್ಮಟದ ಆಶಯಗಳನ್ನು ವಿವರವಾಗಿ ತಿಳಿಸಿದರು. ರಾಷ್ಟ್ರೀಯ ಸಂಶೋಧನಾ ವೇದಿಕೆಯ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ವೇದಿಕೆ ಮೇಲೆ ಉಪಸ್ಥಿತರಿದ್ದರು.