
ಚಿಕ್ಕನಾಯಕನಹಳ್ಳಿ, ಸೆ. ೩- ತಾಲ್ಲೂಕಿನ ಅಭಿವೃದ್ದಿಯಲ್ಲಿ ಗ್ರಾಮ ಗ್ರಾಮಗಳ ಸಂಪರ್ಕ ಕಲ್ಪಿಸುವಂತಹ ರಸ್ತೆಗಳ ಅಭಿವೃದ್ದಿಪಡಿಸಿದರೆ ಆ ಭಾಗದ ಜನರಿಗೆ ಅನುಕೂಲವಾಗಲಿದೆ. ಅದ್ದರಿಂದ ಉತ್ತಮ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಹೇಳಿದರು.
ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರೆವೆರಿಸಿ ಅವರು ಮಾತನಾಡಿದರು.
ಕಸಬಾ ಹೋಬಳಿಯ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಯ ಕ್ಯಾತನಾಯ್ಕನಹಳ್ಳಿಯಿಂದ ಮುದ್ದೇನಹಳ್ಳಿಗೆ ಹೋಗುವಂತಹ ರಸ್ತೆಯನ್ನು ಹಾಗೂ ಎಂ.ಹೆಚ್.ಕಾವಲ್‌ನಿಂದ ಗೌರಸಾಗರಕ್ಕೆ ಹೋಗುವಂತಹ ರಸ್ತೆಯನ್ನು ಅಭಿವೃದ್ದಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಇದರಿಂದ ಈ ಭಾಗದ ಜನರು ಓಡಾಡಲು ಅನುಕೂಲವಾಗಲಿದೆ ಎಂದರು.
ಗ್ರಾಮಾಭಿವೃದ್ದಿಗೆ ಮೊದಲ ಅದ್ಯತೆ ನೀಡುತ್ತಿದ್ದು ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಾಗಿದೆ ಕಾಮಗಾರಿಯ ವೇಳೆ ರಸ್ತೆಯ ಅಕ್ಕಪಕ್ಕದ ರೈತರು ಸಹಕಾರ ನೀಡಬೇಕು ಹಾಗೂ ರಸ್ತೆಯ ಗುಣಮಟ್ಟದ ಬಗ್ಗೆ ಸ್ಥಳೀಯ ಗ್ರಾಮಸ್ಥರೇ ಗಮನಹರಿಸಬೇಕು ಇದರಿಂದ ಉತ್ತಮ ಗುಣಮಟ್ಟದ ರಸ್ತೆಗಳು ಆಗುತ್ತವೆ ಎಂದರು.
ಎಇಇ ತಿಮ್ಮಯ್ಯ ಮಾಹಿತಿ ನೀಡಿ, ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕ್ಯಾತನಾಯ್ಕನಹಳ್ಳಿ ಎಸ್.ಟಿ ಕಾಲೋನಿಯಿಂದ ಮುದ್ದೆನಹಳ್ಳಿಯವರೆಗೆ ರಸ್ತೆ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯ ಅಭೀವೃದ್ದಿ ಕಾಮಗಾರಿಯನ್ನು ಒಟ್ಟು ೫೦ ಲಕ್ಷ ರೂ. ವೆಚ್ಚದಲ್ಲಿ ಮಾಡಲಾಗುವುದು. ಅದೇ ರೀತಿ ಇದೇ ಪಂಚಾಯಿತಿ ವ್ಯಾಪ್ತಿಯ ಎಂ.ಹೆಚ್.ಕಾವಲ್‌ನ ಲಂಬಾಣಿ ತಾಂಡ್ಯದಿಂದ ಗೌರಸಾಗರದವರೆಗೆ ಒಟ್ಟು ಒಂದು ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ದಿಯನ್ನು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್‌ಕುಮಾರ್, ಗ್ರಾ.ಪಂ.ಮಾಜಿ ಅದ್ಯಕ್ಷ ವಸಂತ್‌ಕುಮಾರ್, ಮಾಜಿ ಉಪಾದ್ಯಕ್ಷೆ ಉಮಾ ಟಿ., ಮಾಜಿ ಸದಸ್ಯರುಗಳಾದ ಮಂಜುನಾಥ್, ರಂಗಸ್ವಾಮಿ, ಮಾಜಿ ಅದ್ಯಕ್ಷರುಗಳಾದ ಗಂಗಾಧರಯ್ಯ, ಕಂದಿಕೆರೆ ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

































