ರೂ. 50 ಲಕ್ಷ ಮೊತ್ತದ ದೊಡ್ಡಪ್ಪ ಅಪ್ಪ ವಿದ್ಯಾರ್ಥಿ ವೇತನ

ಬೀದರ್: ಡಿ.21:ತಾಲ್ಲೂಕಿನ ಗೋರನಳ್ಳಿ ಸಮೀಪದ ಶರಣಬಸವೇಶ್ವರ ಪದವಿಪೂರ್ವ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಕಾಲೇಜಿನಲ್ಲಿ ಡಿ. 21 ಮತ್ತು 28 ರಂದು 2026-27ನೇ ಸಾಲಿನ ರೂ. 50 ಲಕ್ಷ ಮೊತ್ತದ ‘ಪೂಜ್ಯ ದೊಡ್ಡಪ್ಪ ಅಪ್ಪ ವಿದ್ಯಾರ್ಥಿ ವೇತನ’ ಪ್ರವೇಶ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ.
ಎರಡೂ ದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12, ಮಧ್ಯಾಹ್ನ 12 ರಿಂದ ಮಧ್ಯಾಹ್ನ 2 ಹಾಗೂ ಮಧ್ಯಾಹ್ನ 3 ರಿಂದ ಸಂಜೆ 5 ರ ವರೆಗೆ ಮೂರು ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ ಎಂದು ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ತಿಳಿಸಿದ್ದಾರೆ.
10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿಭಾಗಗಳ (ಸಿಬಿಎಸ್‍ಇ, ಐಸಿಎಸ್‍ಇ, ಸ್ಟೇಟ್) ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹರು ಎಂದು ಹೇಳಿದ್ದಾರೆ.
ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೆ ಡಾ. ದಾಕ್ಷಾಯಿಣಿ ಹಾಗೂ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರ ನೇತೃತ್ವದಲ್ಲಿ ಪರೀಕ್ಷೆಯಲ್ಲಿ ಸಾಧನೆ ತೋರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಲಾಗುವುದು ಎಂದು ತಿಳಿಸಿದ್ದಾರೆ.
ಪರೀಕ್ಷೆಯಲ್ಲಿ ಮೇಲ್ದರ್ಜೆಯಲ್ಲಿ ತೇರ್ಗಡೆ ಹೊಂದುವ 15 ವಿದ್ಯಾರ್ಥಿಗಳಿಗೆ ಶರಣಬಸವೇಶ್ವರ ಕಾಲೇಜಿನಲ್ಲಿ ಶೇ 100 ರಷ್ಟು ಶುಲ್ಕ ವಿನಾಯಿತಿ ರೂಪದಲ್ಲಿ ವಿದ್ಯಾರ್ಥಿ ವೇತನ ನೀಡಲಾಗುವುದು. 25 ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ 75 ರಷ್ಟು, 40 ವಿದ್ಯಾರ್ಥಿಗಳಿಗೆ ಶೇ 50 ರಷ್ಟು, 50 ವಿದ್ಯಾರ್ಥಿಗಳಿಗೆ ಶೇ 25 ರಷ್ಟು ಹಾಗೂ 35 ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ 15 ರಷ್ಟು ವಿನಾಯಿತಿ ನೀಡಲಾಗುವುದು ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪ್ರವೇಶ ಪರೀಕ್ಷೆಯ ಪ್ರಯೋಜನ ಪಡೆಯಬೇಕು ಎಂದು ಶರಣಬಸವೇಶ್ವರ ಪದವಿಪೂರ್ವ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಕಾಲೇಜು ಪ್ರಾಚಾರ್ಯ ಡಾ. ಸತೀಶ್ ಪ್ರತಾಪುರ ಕೋರಿದ್ದಾರೆ.