Home ಜಿಲ್ಲೆ ಬೆಂಗಳೂರು ದೇವಾಲಯಗಳ ಅಭಿವೃದ್ಧಿಗೆ ೫ ಕೋಟಿ ರೂ. ಅನುದಾನ

ದೇವಾಲಯಗಳ ಅಭಿವೃದ್ಧಿಗೆ ೫ ಕೋಟಿ ರೂ. ಅನುದಾನ

ವಿಜಯಪುರ.ಫೆ.೮- ದೇವನಹಳ್ಳಿ ತಾಲ್ಲೂಕಿನ ಒಟ್ಟು ೧೩೯ ದೇವಾಲಯಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿಗಾಗಿ ಮುಜರಾಯಿ ಇಲಾಖೆಯಿಂದ ೫ ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈ ಪೈಕಿ ವಿಜಯಪುರ ಪಟ್ಟಣದ ವಿವಿಧ ದೇವಾಲಯಗಳಿಗೆ ೧೯ ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ವಿ. ಮಂಜುನಾಥ್ ತಿಳಿಸಿದರು.


ಸಚಿವ ಕೆ.ಹೆಚ್. ಮುನಿಯಪ್ಪನವರ ನಿರ್ದೇಶನದಂತೆ, ವಿಜಯಪುರದ ಗಂಗಾತಾಯಿ, ನಗರೇಶ್ವರಸ್ವಾಮಿ ಹಾಗೂ ವೀರಭದ್ರಸ್ವಾಮಿ ದೇವಾಲಯಗಳಿಗೆ ಇಂಜಿನಿಯರ್‌ಗಳೊಂದಿಗೆ ಸ್ಥಳ ಭೇಟಿ ನೀಡಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.


ಗ್ರಾಮದೇವತೆ ಹಾಗೂ ಗಂಗಾತಾಯಿ ದೇವಾಲಯ: ತಲಾ ೫ ಲಕ್ಷ ರೂ.
ಶ್ರೀ ನಗರೇಶ್ವರ ಸ್ವಾಮಿ ಹಾಗೂ ಆದಿನಾರಾಯಣ ಸ್ವಾಮಿ ದೇವಾಲಯ: ತಲಾ ೩ ಲಕ್ಷ ರೂ.
ವೀರಭದ್ರ ಸ್ವಾಮಿ, ಬಸವೇಶ್ವರ ಹಾಗೂ ವೀರೇಂದ್ರ ದೇಶಿಕೇಂದ್ರ ದೇವಾಲಯ: ತಲಾ ೨ ಲಕ್ಷ ರೂ.


ರಥೋತ್ಸವದ ಮುನ್ನ ಕಾಮಗಾರಿ ಪೂರ್ಣ:”ದೇವಾಲಯಗಳು ಭಕ್ತರ ಶಾಂತಿ ಮತ್ತು ನೆಮ್ಮದಿಯ ಕೇಂದ್ರಗಳಾಗಿವೆ. ಮುಂಬರುವ ತಿಂಗಳುಗಳಲ್ಲಿ ವಿವಿಧ ದೇವಾಲಯಗಳ ಜಾತ್ರೆ ಹಾಗೂ ರಥೋತ್ಸವಗಳು ನಡೆಯಲಿದ್ದು, ಅದಕ್ಕೆ ಮುನ್ನವೇ ಎಲ್ಲಾ ಅಭಿವೃದ್ಧಿ ಕೆಲಸಗಳು ಪೂರ್ಣಗೊಳ್ಳಬೇಕೆಂದು ಸಚಿವರು ಸೂಚಿಸಿದ್ದಾರೆ. ಈ ಎಲ್ಲಾ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರದ ವತಿಯಿಂದ ನಡೆಸಲಾಗುವುದು. ದೇವಾಲಯದ ಅಭಿವೃದ್ಧಿ ಸಮಿತಿಗಳ ಸಲಹೆ ಮತ್ತು ಸಹಕಾರದೊಂದಿಗೆ ಪಾರದರ್ಶಕವಾಗಿ ಕೆಲಸ ಮಾಡಲಾಗುವುದು” ಎಂದು ಮಂಜುನಾಥ್ ಅವರು ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ರಾಜಣ್ಣ, ಮಾಜಿ ಸದಸ್ಯ ಸಂಪತ್ ಕುಮಾರ್, ಮುನಿವೆಂಕಟರಮಣ, ನಗರೇಶ್ವರ ಸ್ವಾಮಿ ದೇವಾಲಯ ಸಮಿತಿಯ ಎನ್. ರುದ್ರಮೂರ್ತಿ, ಪಿ. ಮುರಳಿಧರ್, ಪ್ರವೀಣ್, ನಂಜಣ್ಣ, ಮಹಾಂತಿನ ಮಠದ ಮಾಜಿ ಅಧ್ಯಕ್ಷ ವಿ. ಪ್ರಭುದೇವ್, ಕಾರ್ಯದರ್ಶಿ ವಿ. ವಿಶ್ವನಾಥ್, ಪಿ.ಪಿ.ಆರ್. ರಮೇಶ್, ಕೋಕೋಕೋಲಾ ಮಂಜುನಾಥ್, ಸಿ. ಸುರೇಶ್ ಬಾಬು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.