
ಕಲಬುರಗಿ,ಮೇ.22-ಹೋಟೆಲ್ ವ್ಯಾಪಾರಿಯೊಬ್ಬರು ಖಾಸಗಿ ಫೈನಾನ್ಸ್‍ನಲ್ಲಿ ಪಡೆದಿದ್ದ ಲೋನ್ ಕಟ್ಟುವ ಸಲುವಾಗಿ ಸ್ನೇಹಿತರ ಹತ್ತಿರ ಕೈಗಡವಾಗಿ ತಂದಿದ್ದ 18 ಲಕ್ಷ ರೂಪಾಯಿಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ನಗರದ ಹೀರಾಪುರ ಗೇಟ್ ಹತ್ತಿರದ ಪ್ರಕೃತಿ ಕಾಲೋನಿಯ ಕ್ಯೂಪಿ ಲೇಔಟ್‍ನಲ್ಲಿ ನಡೆದಿದೆ.
ರವಿಚಂದ್ರ ಪುಟಗಿ ಎಂಬುವವರ ಮನೆ ಬೀಗ ಮುರಿದು ಕಳ್ಳರು 18 ಲಕ್ಷ ರೂ.ನಗದು 40 ಸಾವಿರ ರೂ.ಮೌಲ್ಯದ ಬೆಳ್ಳಿ ಸಾಮಾನು ಸೇರಿ 18.50 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿಕೊಂಡು ಹೋಗಿದ್ದಾರೆ.
ರವಿಚಂದ್ರ ಅವರು ಹೋಟೆಲ್ ವ್ಯಾಪಾರಿಯಾಗಿದ್ದು, ಖಾಸಗಿ ಫೈನಾನ್ಸ್‍ನಲ್ಲಿ ತೆಗೆದುಕೊಂಡಿದ್ದ ಲೋನ್ ಕಟ್ಟುವ ಸಲುವಾಗಿ ಸ್ನೇಹಿತರ ಹತ್ತಿರ ಕೈಗಡವಾಗಿ 18 ಲಕ್ಷ ರೂ.ತಂದು ಮನೆಯಲ್ಲಿ ಇಟ್ಟಿದ್ದರು. ಮನೆಯವರೆಲ್ಲ ಸೇರಿ ಮನೆಗೆ ಬೀಗ ಹಾಕಿಕೊಂಡು ಜಗತ್ ವೃತ್ತದಲ್ಲಿರುವ ಸಂಬಂಧಿಕರ ಮದುವೆ ಸಮಾರಂಭಕ್ಕೆಂದು ಹೋಗಿದ್ದ ವೇಳೆ ಕಳ್ಳರು ಮನೆ ಕಳ್ಳತನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.