
ಕಲಬುರಗಿ,ನ.28-ಭಾರಿ ಮಳೆಗೆ ಬೆಳೆಗಳು ಹಾನಿಗೊಳಗಾಗಿ ಸಂಕಷ್ಟದಲ್ಲಿದ್ದ ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯದ ಉತ್ತರ ಭಾಗದಲ್ಲಿರುವ ಜಿಲ್ಲೆಗಳ ರೈತರ ಕಣ್ಣೀರು ಒರೆಸಲು ಮುಂದಾಗ ರಾಜ್ಯ ಸರ್ಕಾರ ಇನ್‍ಪುಟ್ ಸಬ್ಸೀಡಿ ರೂಪದಲ್ಲಿ ಪರಿಹಾರ ಧನ ಬಿಡುಗಡೆ ಮಾಡಿರೋದನ್ನು ಕಲಬುರಗಿ ಶಾಸಕ ಅಲ್ಲಂಪ್ರಭು ಪಾಟೀಲ್ ಸ್ವಾಗತಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ 14.24 ಲಕ್ಷ ಫಲಾನುಭವಿಗಳಿಗೆ ಒಟ್ಟು 1,033.60 ಕೋಟಿ ಇನ್ ಪುಟ್ ಸಬ್ಸಿಡಿ ಮೊತ್ತ ರೈತರ ಖಾತೆಗೆ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಲಬುರಗಿ ಜಿಲ್ಲೆಯ ಒಟ್ಟು 3.24 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ಅದರಲ್ಲಿ ಪಾವತಿಗೆ ಪರಿಗಣಿಸಲಾಗಿರುವ ವಿಸ್ತೀರ್ಣ 2,91,381.52 ಹೆಕ್ಟರ್ ಇದ್ದು ಒಟ್ಟು 3.23 ಲಕ್ಷ ಫಲಾನುಭವಿ ರೈತರಿಗೆ ರೂ 25,097.21 ಲಕ್ಷ ಪಾವತಿ ಪ್ರಕ್ರಿಯೆ ಚಾಲು ಇದೆ.
ರಾಜ್ಯದ 14.24 ಲಕ್ಷ ಫಲಾನುಭವಿಗಳಿಗೆ ಇನ್ ಪುಟ್ ಸಬ್ಸಿಡಿ ರೂ 1,033. 60 ಕೋಟಿ ರೈತರ ಖಾತೆಗೆ ವರ್ಗಾವಣೆಗೆ ಕ್ರಮವಹಿಸಲಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಕೇತಿಕವಾಗಿ ಪರಿಹಾರದ ಹಣವನ್ನು ರೈತರ ಖಾತೆಗೆ ವರ್ಗಾಯಿಸುವ ಮೂಲಕ ಪರಿಹಾರ ಹಂಚಿಕೆಗೆ ಚಾಲನೆ ನೀಡುವ ಮೂಲಕ ರೈತರ ಕೈ ಹಿಡಿದಿದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಮೂಲಕ ರೈತರಲ್ಲಿ ಹೊಸ ವಿಶ್ವಾಸ ತುಂಬುವ ಯತ್ನ ಮಾಡಿದೆ ಎಂದು ಅಲ್ಲಂಪ್ರಭು ಪಾಟೀಲರು ಹೇಳಿದ್ದಾರೆ.
ಕಲಬುರಗಿ ಜಿಲ್ಲೆ ಸೇರಿದಂತೆ ಉಕ ಬಹುಭಾಗದಲ್ಲಿ ಅತಿವೃಷ್ಟಿಯಿಂದ ರೈತರ ಬದುಕು ಸಂಕಟದಿಂದ ಕೂಡಿತ್ತು. ಮುಖ್ಯಮಂತ್ರಿ ಗಳು ಕಲಬುರಗಿಗೆ ಬಂದಾಗ ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿಗಳು ಕಲಬುರಗಿಯಲ್ಲಿ ಹೆಚ್ಚುವರಿ ಪರಿಹಾರ ಮೊತ್ತವನ್ನು ಘೋಷಿಸಿದ್ದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೂ ರೈತರ ಪರ ಹೆಚ್ಚಿನ ಮುತುವರ್ಜಿ ತೋರಿ ಮುಖ್ಯಮಂತ್ರಿಗಳ ಗಮನಕ್ಕೆ ರೈತರ ಸಂಕಷ್ಟ ತಂದಿದ್ದರಿಂದಲೇ ಕಲಬುರಗಿಗೆ ಆಗಮಿಸಿದ್ದ ಸಿಎಂ ರೈತರ ಕಷ್ಟ ನಷ್ಟಗಳನ್ನು ಅವಲೋಕಿಸಿದ್ದರು. ಅಂತೆಯೇ ಕಲಬುರಗಿ ಜಿಲ್ಲೆಗೆ ಅತಿ ಹೆಚ್ಚಿನ ಪರಿಹಾರ ದೊರಕಿದೆ ಎಂದು ಶಾಸಕ ಅಲ್ಲಂಪ್ರಭು ಪಾಟೀಲರು ಜಿಲ್ಲಾ ಉಸ್ತುವಾರಿ ಸಚಿವರಿಗೂ ಈ ಸಂಬಂಧ ಅಭಿನಂದಿಸಿದ್ದಾರೆ.
ಕಲಬುರ್ಗಿ ಜಿಲ್ಲೆಗೆ ದೊರಕಿರುವ ರಾಜ್ಯ ಸರ್ಕಾರ ಘೋಷಿಸಿದ ಹೆಚ್ಚುವರಿ ಇನ್ ಪುಟ್ ಸಬ್ಸಿಡಿ ಮೊತ್ತ 24,775.82 ಲಕ್ಷಗಳು ಹಾಗೂ ಜಿಲ್ಲೆಗೆ ಈಗಾಗಲೇ ವಿತರಿಸಲಾಗಿರುವ ಮತ್ತು ಪಾವತಿ ಪ್ರಕ್ರಿಯೆಯಲ್ಲಿರುವ ಒಟ್ಟು ಮೊತ್ತ 49,873.03 ಲಕ್ಷಗಳು. ರೈತರ ಪರವಾಗಿ ಸರ್ಕಾರಕ್ಕೂ ಶಾಸಕ ಅಲ್ಲಂಪ್ರಭು ಪಾಟೀಲ್ ಧನ್ಯವಾದಗಳನ್ನು ತಿಳಿಸಿದ್ದಾರೆ.






















