ಸಂಜೆ ರಾಯ್ ಅಂತ್ಯಕ್ರಿಯೆ

ಬೆಂಗಳೂರು,ಫೆ.೧- ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ, ಉದ್ಯಮಿ ಸಿ.ಜೆ.ರಾಯ್ ಅವರ ಅಂತ್ಯಕ್ರಿಯೆಯು ಅವರಿಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರ್ಯಾಂಡ್‌ನಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ


ಮರಣೋತ್ತರ ಪಾರ್ಥಿವ ಶರೀರವನ್ನು ಬೌರಿಂಗ್ ಆಸ್ಪತ್ರೆಯಿಂದ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಪತ್ನಿ ಹಾಗೂ ಮಕ್ಕಳಿಗೆ ಹಸ್ತಾಂತರ ಮಾಡಲಾಗಿದ್ದು, ರಾಯ್ ಅವರ ಇಚ್ಛೆಯಂತೆ ಬನ್ನೇರುಘಟ್ಟದ ಕಾಸಾಗ್ರಾಂಡ್‌ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.


ಕುಟುಂಬದ ಮೂಲಗಳ ಪ್ರಕಾರ ರಾಯ್ ಅವರು ತಮ್ಮ ಅಂತಿಮ ಸಂಸ್ಕಾರವನ್ನು ಇದೇ ಸ್ಥಳದಲ್ಲೇ ನಡೆಸಬೇಕು ಎಂಬ ಆಸೆಯನ್ನು ಮೊದಲೇ ಹೇಳಿಕೊಂಡಿದ್ದರು . ಅಂತ್ಯಕ್ರಿಯೆಗೆ ಮುನ್ನ ಬನ್ನೇರುಘಟ್ಟದಲ್ಲಿರುವ ಕಾಸಾಗ್ರಾಂಡ್‌ನಲ್ಲಿ ಮಧ್ಯಾಹ್ನ ೨ ಗಂಟೆಯವರೆಗೂ ರಾಯ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇರಿಸಲಾಗುತ್ತಿದೆ. ಅಂತಿಮ ಗೌರವ ಸಲ್ಲಿಸಲು ಸಂಬಂಧಿಕರು, ಆಪ್ತರು ಹಾಗೂ ಅಭಿಮಾನಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ನಂತರ ಕ್ರಿಶ್ಚಿಯನ್ ಧರ್ಮದ ವಿಧಿ-ವಿಧಾನದಂತೆ ಅಂತ್ಯ ಸಂಸ್ಕಾರ ನೆರವೇರಲಿದೆ.


ಶಾಸಕ ಹ್ಯಾರಿಸ್ ಭೇಟಿ:

ಬೌರಿಂಗ್ ಆಸ್ಪತ್ರೆ ಬಳಿ ರಾಯ್ ಪತ್ನಿ ಮತ್ತು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ಆಸ್ಪತ್ರೆಯಿಂದ ಹೊರಟ ಆಂಬ್ಯುಲೆನ್ಸ್‌ನ್ನು ರಾಯ್ ಅವರ ಕಾನ್ಫಿಡೆಂಟ್ ಕಚೇರಿ ಮುಂದೆ ಕೆಲಕಾಲ ನಿಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಶಾಸಕ ಎನ್.ಎ.ಹ್ಯಾರಿಸ್ ಅವರು ರಾಯ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.


ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಸಿ.ಜೆ.ರಾಯ್ ಅವರು ಜನವರಿ ೩೦ರಂದು ಪಿಸ್ತೂಲ್‌ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಶೋಕನಗರ ಠಾಣಾ ವ್ಯಾಪ್ತಿಯ ಲ್ಯಾಂಗ್ ಫೋರ್ಡ್ ಟೌನ್‌ನಲ್ಲಿರುವ ತಮ್ಮದೇ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಸಿ.ಜೆ.ರಾಯ್, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದರು. ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಘಟನೆ ನಡೆದಿತ್ತು.