ಖಿನ್ನತೆಯಿಂದ ಬಳಲುತ್ತಿದ್ದ ರಾಯ್

ಬೆಂಗಳೂರು,ಫೆ.೨-ಕಾನ್‌ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು,ಆದಾಯ ತೆರಿಗೆ(ಐಟಿ) ತನಿಖೆ ವೇಳೆಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ದಿಢೀರ್ ನಿರ್ಧಾರಕ್ಕೆ ಅವರ ಮಾನಸಿಕ ಸ್ಥಿತಿಯೇ ಕಾರಣ ಎನ್ನುವ ಪ್ರಶ್ನೆ ಮೂಡಿದೆ.


ಇದಕ್ಕೆ ಪುಷ್ಠಿ ಕೊಡುವಂತೆ ಹಲವು ದಿನಗಳಿಂದ ರಾಯ್ ಮನೋವೈದ್ಯರಿಂದ ಕೌನ್ಸಿಲಿಂಗ್ ಪಡೆಯುತ್ತಿದ್ದರು ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.


ತೀವ್ರ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದ ರಾಯ್ ಖ್ಯಾತ ಮನೋವಿಜ್ಞಾನಿ ಬಳಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.
ಆತ್ನಹತ್ಯೆಗೆ ಶರಣಾಗುವ ಹಿಂದಿನ ದಿನವಷ್ಟೇ ನಗರದ ಜಯನಗರ ೮ನೇ ಬ್ಲಾಕ್‌ನಲ್ಲಿರುವ ಖ್ಯಾತ ಮನೋವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಾಗೂ ಕೌನ್ಸಿಲಿಂಗ್ ಪಡೆದಿದ್ದರು ಎನ್ನಲಾಗಿದೆ.


ಈ ವೇಳೆ ವೈದ್ಯರ ಬಳಿ ಜೀವನದ ಒತ್ತಡಗಳು, ವೈಯಕ್ತಿಕ ಸಂಕಷ್ಟಗಳ ಕುರಿತು ರಾಯ್ ಮನಬಿಚ್ಚಿ ಮಾತನಾಡಿದ್ದರಂತೆ. ಸಾಮಾಜಿಕ ಜಾಲತಾಣಗಳಲ್ಲಿ ಸಹ ಅವರು ಜೀವನ ಮತ್ತು ಸಾವಿನ ಕುರಿತು ಪದೇಪದೇ ಚರ್ಚಿಸುತ್ತಿದ್ದರಲ್ಲದೆ, ಸಾವಿನ ವಿಷಯದ ಮೇಲೆ ಸಿನಿಮಾ ನಿರ್ಮಾಣಕ್ಕೂ ಅವರು ಕೈ ಹಾಕಿದ್ದರೆಂದೂ ಹೇಳಲಾಗಿದೆ.
ಹೊರಗಿನಿಂದ ಆರೋಗ್ಯವಾಗಿ ಕಾಣಿಸಿಕೊಂಡರೂ ಒಳಗೊಳಗೆ ತೀವ್ರ ಒತ್ತಡ ಅನುಭವಿಸುತ್ತಿದ್ದ ರಾಯ್, ಚಿಕಿತ್ಸೆ ಪಡೆಯುತ್ತಿದ್ದರೂ ಖಿನ್ನತೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗದೇ ಈ ದಿಢೀರ್ ನಿರ್ಧಾರ ತೆಗೆದುಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.


ಸೌಂಡ್‌ಪ್ರೂಫ್ ರೂಮ್? :


ರಾಯ್‌ರ ಕಚೇರಿಯ ಚೇಂಬರ್ ಸಂಪೂರ್ಣವಾಗಿ ಸೌಂಡ್‌ಪ್ರೂಫ್ ಆಗಿದ್ದರಿಂದ ಘಟನೆ ನಡೆದು ೨೦ ನಿಮಿಷಗಳಾದರೂ ಸಿಬ್ಬಂದಿಗೆ ತಿಳಿದಿರಲಿಲ್ಲೆ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ. ದೈನಂದಿನ ವ್ಯವಹಾರಗಳು ಹೊರಗೆ ಕೇಳಿಸದಂತೆ ವಿಶೇಷ ಇಂಟೀರಿಯರ್ ಮಾಡಿಸಿಕೊಂಡಿದ್ದ ರಾಯ್ ಕೊಠಡಿಯಲ್ಲಿ ಒಳಗಿನ ಶಬ್ದಗಳು ಹೊರಗೆ ಹೋಗುತ್ತಿರಲಿಲ್ಲ. ಇದರಿಂದಾಗಿ ಒಳಗೆ ಅಸಾಮಾನ್ಯ ಘಟನೆ ನಡೆದರೂ ಸಿಬ್ಬಂದಿಗೆ ಅನುಮಾನ ಉಂಟಾಗಿರಲಿಲ್ಲ ಎಂದು ಹೇಳಲಾಗಿದೆ. ಚೇಂಬರ್‌ಗೆ ಹೋಗಿ ಬಹುಕಾಲ ಪ್ರತಿಕ್ರಿಯೆ ಇಲ್ಲದ ಹಿನ್ನೆಲೆ ಸಿಬ್ಬಂದಿ ಬಾಗಿಲು ತಟ್ಟಿದರೂ ರಾಯ್‌ರಿಂದ ಉತ್ತರ ಸಿಗದ ಕಾರಣ ಬಾಗಿಲು ತೆರೆಯಲಾಗಿದ್ದು, ಈ ವೇಳೆ ರಾಯ್ ಅವರು ಕುರ್ಚಿಯ ಮೇಲೆ ಕುಸಿದ ಬಿದ್ದಿದ್ದರೆಂದು ಕಂಡುಬಂದಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತೆಂದು ತಿಳಿದುಬಂದಿದೆ.