
ಕಲಬುರಗಿ,ಜೂ.11-ಇಲ್ಲಿನ ವಿದ್ಯಾನಗರ ನಿವಾಸಿಯಾದ ರೌಡಿಶೀಟರ್ ಚೇತನ್ ತಂದೆ ಚಂದ್ರಕಾಂತ ಹೈಬತ್ತಿ (30)ಯನ್ನು ಕಲಬುರಗಿ ನಗರದಿಂದ ತುಮಕೂರ ನಗರ ಪೊಲೀಸ್ ಠಾಣೆಗೆ ಗಡಿಪಾರು ಮಾಡಲಾಗಿದೆ.
ಈತನ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ 3, ಸ್ಟೇಷನ್ ಬಜಾರ್ 2, ಸಬ್-ಅರ್ಬನ್ ಮತ್ತು ರಾಘವೇಂದ್ರ ನಗರ ತಲಾ 1 ಮತ್ತು ವಡಗೇರಾ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 8 ಪ್ರಕರಣ ದಾಖಲಾಗಿದ್ದವು.
ಒಟ್ಟು 14 ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದು, ಈತನ ವಿರುದ್ಧ “ಎ”ರೌಡಿಶೀಟರ್ ತೆರೆಯಲಾಗಿದೆ. ಕೊಲೆಯತ್ನ, ಮಾರಕಾಸ್ತ್ರಗಳಿಂದ ಹಲ್ಲೆ, ಸುಲಿಗೆ, ಸರ್ಕಾರಿ ಕೆಲಸಕ್ಕೆ ಅಡ್ಡಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಅಲ್ಲದೆ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ತಂದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.
ಈತನ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮತ್ತು ಕಾನೂನಿನ ಬಗ್ಗೆ ಸೂಕ್ತ ಗೌರವ ಮೂಡಲು ಆರೋಪಿಯನ್ನು ಗಡಿಪಾರು ಮಾಡುವುದು ಸೂಕ್ತ ಎಂದು ಅಶೋಕ ನಗರ ಪೊಲೀಸ್ ಠಾಣೆ ಪಿಐ ಅರುಣಕುಮಾರ ಮತ್ತು ದಕ್ಷಿಣ ಉಪ ವಿಭಾಗದ ಎಸಿಪಿ ಅವರು ವರದಿ ನೀಡಿದ ಹಿನ್ನೆಲೆಯಲ್ಲಿ ಈತನನ್ನು ಕಲಬುರಗಿ ನಗರದಿಂದ ತುಮಕೂರ ನಗರ ಪೊಲೀಸ್ ಠಾಣೆಗೆ ಗಡಿಪಾರು ಮಾಡಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಮತ್ತು ಅಪರ ಜಿಲ್ಲಾ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.