ರೌಡಿಶೀಟರ್ ಹಾಜಿ ಸರ್ವತ್ ಅಲಿ ಮೈಸೂರು ಜೈಲಿಗೆ ಹಸ್ತಾಂತರ

ಕಲಬುರಗಿ,ಸೆ.30-ಗುಂಡಾ ಕಾಯ್ದೆಯಡಿ ರೂಢಿಗತ ಅಪರಾಧಿ, ರೌಡಿಶೀಟರ್ ಹಾಜಿ ಸರ್ವತ್ ಅಲಿ ಅಲಿಯಾಸ್ ಸರ್ವತ್ ಅಲಿಯನ್ನು ಬಂಧಿಸಿರುವ ಪೊಲೀಸರು ಮೈಸೂರು ಜೈಲಿಗೆ ಹಸ್ತಾಂತರಿಸಿದ್ದಾರೆ.
ಈತನ ವಿರುದ್ಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ 1, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ 2, ರೋಜಾ ಪೊಲೀಸ್ ಠಾಣೆಯಲ್ಲಿ 1, ಶಹಾಬಾದ ಹಾಗೂ ಜೇವರ್ಗಿ ಪೊಲೀಸ್ ಠಾಣೆಗಳಲ್ಲಿ ತಲಾ 1, ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 2, ಸೈದಾಪೂರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ.
2013 ರಿಂದ 25 ರವರೆಗೆ ಭಾರತೀಯ ದಂಡ ಸಂಹಿತೆ ಹಾಗೂ ಭಾರತೀಯ ಆಯುಧ ಕಾಯ್ದೆ ಅಡಿಯಲ್ಲಿ 4 ಪ್ರಕರಣ, ಬಿಎನ್‍ಎಸ್ ಕಾಯ್ದೆ 2023ರಲ್ಲಿ 5 ಪ್ರಕರಣ ಮತ್ತು ದಂಡ ಪ್ರಕ್ರಿಯೆ ಅಡಿಯಲ್ಲಿ 3 ಪ್ರಕರಣ ಸೇರಿ ಒಟ್ಟು 12 ಪ್ರಕರಣ ದಾಖಲಾಗಿದ್ದು, ಆರೋಪಿಯು ರೂಢಿಗತ ಅಪಾದಿತನಾಗಿದ್ದು, “ಎ”ರೌಡಿಶೀಟರ್ ಎಂದು ಗುರುತಿಸಲಾಗಿದೆ. ನಗರದ ವಿವಿಧ ಪೊಲೀಸ್ ಠಾಣೆ ಮತ್ತು ಹೊರ ಜಿಲ್ಲೆಗಳಲ್ಲಿ ಕೊಲೆ, ಕೊಲೆಯತ್ನ, ಹಲ್ಲೆ, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಸಾರ್ವಜನಿಕರ ಶಾಂತಿ, ನೆಮ್ಮದಿಗೆ ಭಂಗ ತಂದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.
ಈ ಹಿನ್ನೆಲೆಯಲ್ಲಿ ಈತನನ್ನು ಗುಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ, ಮೈಸೂರು ಕೇಂದ್ರ ಕಾರಾಗೃಹಕ್ಕೆ ಹಸ್ತಾಂತರಿಸಿ ಪೆÇಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್ ಡಿ. ಅವರು ಆದೇಶ ಹೊರಡಿಸಿದ್ದಾರೆ.