Home ಜಿಲ್ಲೆ ಯಶಸ್ವಿಯಾಗಿ ಜರುಗಿದ ರೋಟರಿ ಸಿಲ್ವರ್ ಸ್ಟಾರ್ ರೈಸ್ ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ

ಯಶಸ್ವಿಯಾಗಿ ಜರುಗಿದ ರೋಟರಿ ಸಿಲ್ವರ್ ಸ್ಟಾರ್ ರೈಸ್ ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ

ಬೀದರ್: ಮೇ.31:ಕಲ್ಯಾಣ ಕರ್ನಾಟಕದಲ್ಲಿ ಟ್ಯಾಲೆಂಟ್ ಗಳಿಗೆ ಕೊರತೆ ಇಲ್ಲಾ, ಆದರೆ ನಾಯಕತ್ವದ ಕೊರತೆ ಇದೆ ಇದಕ್ಕೆ ಮುಖ್ಯ ಕಾರಣ ನಾವು ಕಲ್ಯಾಣ ಕರ್ನಾಟಕದ ನಾಯಕತ್ವವನ್ನು ಕೆಲವು ಕುಟುಂಬಕ್ಕೆ ಅಡ ಇಟ್ಟಿರುವುದು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟರು.

ನಗರದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಮಂಡಳಿಯ ಬಿ.ವಿ.ಭೂಮರೆಡ್ಡಿ ಕಾಲೇಜು ಆವರಣದಲ್ಲಿ ರೋಟರಿ ಕ್ಲಬ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ ರೈಸ್ ಕಲ್ಯಾಣ ಕರ್ನಾಟಕ ಉದ್ಯೋಗ ಮೇಳವನ್ನು ಉದ್ದೇಶಿಸಿ ವರ್ಚುವಲ್ ಮುಖಾಂತರ ಮಾತನಾಡಿ, ನಮ್ಮ ರಾಜ್ಯದಲ್ಲಿ ವಾರ್ಷಿಕವಾಗಿ ಸಾಮಾನ್ಯ ಕನ್ನಡಿಗ 3 ಲಕ್ಷ ದುಡಿದರೆ, ಕಲ್ಯಾಣ ಕರ್ನಾಟಕ ಭಾಗದ ಸಾಮಾನ್ಯ ಜನ ಕೇವಲ 1 ಲಕ್ಷ ಮಾತ್ರ ದುಡಿಯುತ್ತಾನೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಶಿಕ್ಷಣ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 25 ಸಾವಿರ ಶಿಕ್ಷಕರ ಕೊರತೆ ಇದೆ. ಇಂತಹ ಸಮಸ್ಯೆಗಳನ್ನ ಸರಿಪಡಿಸಿದಾಗ ಮಾತ್ರ ನಾವು ಈ ವ್ಯತ್ಯಾಸವನ್ನು ಸರಿದೂಗಿಸಬಹುದು.

ಇತ್ತೀಚಿಗೆ ಕೇಂದ್ರ ಸರ್ಕಾರದ ಕೆಲವು ಯೋಜನೆಗಳಿಂದ ಈ ಅಸಮಾನತೆ ಸರಿದೂಗುತ್ತಿದೆ. ದಶಕಗಳಿಂದ ಅಭಿವೃದ್ಧಿ ಎಂದರೆ ಕೇವಲ ಬೆಂಗಳೂರಿಗೆ ಸೀಮಿತವಾಗಿದೆ ಆದರೆ ಅದು ಹೋಗಲಾಡಬೇಕು, ಬೆಂಗಳೂರಿಗೆ ಬರುವಂತಹ ಅಭಿವೃದ್ಧಿ ಕೆಲಸಗಳು ಕಲ್ಯಾಣ ಕರ್ನಾಟಕಕ್ಕೆ ಬಂದಾಗ ಮಾತ್ರ ನಿಜವಾದ ಅಭಿವೃದ್ಧಿ ಆಗುತ್ತದೆ ಎಂದರು.

ರೋಟರಿ ಕ್ಲಬ್ ಬೀದರ್ ಸಿಲ್ವರ್ ಸ್ಟಾರ್ ಅಧ್ಯಕ್ಷ ಆದಿಶ್ ವಾಲಿ ಮಾತನಾಡಿ, ಬೀದರ್ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಇಂತಹ ಒಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಾನು ಈ ಹಿಂದೆ ಲಂಡನ್ ನಲ್ಲಿ ಓದುವಾದ ಈ ರೀತಿ ಯೂತ್ ಸಮೀಟ್ ಹಮ್ಮಿಕೊಂಡಿದ್ದೆವು, ಅದೇರೀತಿ ನಮ್ಮ ಕಲ್ಯಾಣ ಕರ್ನಾಟಕದಲ್ಲಿಯೂ ಸಹ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇಲ್ಲಿ ಬಂದಿರುವ ಸುಮಾರು 50ಕ್ಕೂ ಅಧಿಕ ಕಂಪನಿಗಳಲ್ಲಿ ಸಾವಿರಾರು ಉದ್ಯೋಗಿಗಳ ಅವಶ್ಯಕತೆಯಿದ್ದು ಉದ್ಯೋಗ ಆಕಾಂಕ್ಷಿಗಳು ತಮ್ಮ ಉದ್ಯೋಗವನ್ನು ಪಡೆಯುವ ಮೂಲಕ ಕಲ್ಯಾಣ ಕರ್ನಾಟಕವನ್ನ ಹಿಂದುಳಿದ ಜಿಲ್ಲೆಯ ಹಣೆಪಟ್ಟಿಯಿಂದ ಮುಕ್ತಗೊಳಿಸಲು ನೀವೆಲ್ಲ ಕಾರಣೀಭೂತರಾಗಬೇಕು ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶರಣು ಪಪ್ಪಾ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಬೀದರ್ ಜಿಲ್ಲೆಯನ್ನ ಅಭಿವೃದ್ಧಿಯತ್ತ ಕೊಂಡೊಯ್ಯಲು ವಾಲಿ ಪರಿವಾರ ಕಳೆದ 2,3 ದಶಕಗಳಿಂದ ಕೆಲಸ ಮಾಡುತ್ತಿದೆ, ಅವರ ತಂದೆಯವರ ಮಾರ್ಗದರ್ಶನದಲ್ಲಿ ಇವತ್ತು ಆದಿಶ್ ವಾಲಿ ಅವರು ಇವತ್ತು ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸಲು ಹೊರಟಿರುವುದು ನಿಜಕ್ಕೂ ಶ್ಲಾಘನೀಯ. ನಮ್ಮ ಕಲ್ಯಾಣ ಕರ್ನಾಟಕ ಭಾಗದ ಯುವಕರು ತಾವು ಮಾನಸಿಕವಾಗಿ ನಾವು ಹಿಂದುಳಿದಿದ್ದೀವಿ ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ ಆದರೆ ಆ ತಪ್ಪು ಕಲ್ಪನೆ ನಮ್ಮ ತಲೆಯಿಂದ ತೆಗೆದು ಹಾಕುವ ಕೆಲಸವನ್ನು ನಾವು ಮಾಡೋಣ. ನಾವು ಮನಸ್ಸು ಮಾಡಿದರೆ ಏನನ್ನಾದರೂ ಕೂಡಾ ಸಾಧಿಸಬಹುದು ಎಂದು ಹೇಳಿದರು.

ಬಸವರಾಜ ಧನ್ನೂರ ಮಾತನಾಡಿ, ನಾನು ಕಳೆದ 20 ವರ್ಷಗಳಿಂದ ರೋಟರಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಆದರೆ ನಾವು ಯಾವತ್ತೂ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದಿಲ್ಲ ಆದಿಶ್ ವಾಲಿ ಅವರು ಈ ಪ್ರಯತ್ನ ಮಾಡಿದ್ದಕ್ಕೆ ನಾನು ಅವರಿಗೆ ಮೊದಲಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಕೇವಲ ಉದ್ಯೋಗ ಮೇಳ ಅಷ್ಟೇ ಅಲ್ಲದೆ ಬೀದರ್ ಜಿಲ್ಲೆಯ ಗ್ರಾಮೀಣ ಭಾಗದ 50 ಜನ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2 ವರ್ಷಗಳ ಪಿಯೂ ಶಿಕ್ಷಣವನ್ನು ಕೊಡಲು ಕೂಡಾ ಆದಿಶ್ ವಾಲಿ ನೇತೃತ್ವದ ರೋಟರಿ ಸಿಲ್ವರ್ ಸ್ಟಾರ್ ಹೊರಟಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮೊಟೊಕ್ರಾಸ್ ಸಂಸ್ಥಾಪಕ ಕರಣ್ ಜಾವಲಿ ಮಾತನಾಡಿ, ನೀವು ಯಾವುದೇ ಕ್ಷೇತ್ರದಲ್ಲಿ ಮುಂದುವರೆಯಬೇಕಾದರೂ ನಮಗೆ ಮುಖ್ಯವಾಗಿ ಬೇಕಾದದ್ದು ಸಂಭಾಷಣೆ, ಹಾಗಾಗಿ ಪ್ರತಿಯೊಬ್ಬರು ತಮ್ಮ ಸಂಭಾಷಣೆ ಹಾಗೂ ಸಂಹವನದ ಬಗ್ಗೆ ಗಮನ ಹರಿಸಬೇಕು.
ಪ್ರತಿಯೊಬ್ಬರು ಒಂದು ಸ್ವಂತ ಉದ್ಯಮವನ್ನ ಪ್ರಾರಂಭ ಮಾಡಬೇಕಾದರೆ ಮೊದಲು ಒಂದು ಐಡಿಯಾ ಇರಬೇಕು. ಈ ವೈಜ್ಞಾನಿಕ ಯುಗದಲ್ಲಿ ನೀವು ನಿಮ್ಮ ತಲೆಯಲ್ಲಿ ಸ್ಪಷ್ಟವಾದ ಐಡಿಯಾ ಹೊಂದಿದ್ದರೆ ಸಾಕು ಂI ನಿಮಗೆ ಹೇಗೆ ಮುಂದುವರೆಯಬೇಕು ಎಂಬುದನ್ನು ಸಹ ಹೇಳಿಕೊಡುತ್ತದೆ.
ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಗುರು ಮತ್ತು ಗುರಿ ಹೊಂದಬೇಕು, ಗುರು ಎಷ್ಟು ಜನರು ಬೇಕಾದರೂ ಇರಲಿ ಆದರೆ ಗುರಿ ಒಂದೇ ಆಗಿರಬೇಕು. ನಾನು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ವಿಚಾರಗಳನ್ನು ನಂಬಿ ಬದುಕುತ್ತಿದ್ದೇನೆ ಎಂದು ತಿಳಿಸಿದರು.

ಖ್ಯಾತ ಉದ್ಯಮಿ ಕ್ಷಿತೀಜಾ ಏರೋಳಕರ್ ಮಾತನಾಡಿ, ನಮ್ಮ ಭಾಗದಲ್ಲಿನ ವಿದ್ಯಾರ್ಥಿಗಳಲ್ಲಿ ಮೋಟಿವೇಶನ್ ಹಾಗೂ ಇನ್ನೋವೇಶನ್ ಎರಡರ ಕೊರತೆ ಕೂಡಾ ಇದೆ. ವಿದ್ಯಾರ್ಹತೆ ಇದೆ ಆದರೆ ಸ್ಕಿಲ್ ಕೊರತೆಯಿಂದ ಆ ವಿದ್ಯಾರ್ಹತೆ ವ್ಯರ್ಥವಾಗುತ್ತಿದೆ.
ಆದ್ದರಿಂದ ಯುವಕರು ಬೀದರ್ ಜಿಲ್ಲೆಗೆ ಮಾತ್ರ ಸೀಮಿತವಾಗದೆ, ಬೇರೆ ಬೇರೆ ರಾಜ್ಯ ಹಾಗೂ ಪ್ರದೇಶಗಳಿಗೆ ತೆರಳಿ ಅಲ್ಲಿ ಸ್ಕಿಲ್ ಕಲಿತು ಇಲ್ಲಿ ಬಂದು ಉದ್ಯಮ ಪ್ರಾರಂಭಿಸಿದರೆ ನೀವು ಕಂಡಿತಾ ಯಶಸ್ಸು ಕಾಣ್ತೀರಾ ಎಂದರು.

ಉದ್ಯೋಗ ಮೇಳದಲ್ಲಿ ಸುಮಾರು 1200ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಶರಣಬಸಪ್ಪ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಅನಿಲಕುಮಾರ ಬಿದ್ವೇ , ರೋಟರಿ ಕಲ್ಯಾಣ ಝೋನ್ ಗವರ್ನರ್ ಹಾವಶೆಟ್ಟಿ ಪಾಟೀಲ್, ಬೀದರ್ ಚೇಂಬರ್ ಆಫ್ ಕಾಮರ್ಸ್ ಗೌರವ ಕಾರ್ಯದರ್ಶಿ ವೀರೇಂದ್ರ ಶಾಸ್ತ್ರಿ, ವಾಲಿ ಗ್ರೂಪ್ ನಿರ್ದೇಶಕಿ ಅಂಜನಾ ವಾಲಿ, ರೋಟರಿ ಸಿಲ್ವರ್ ಸ್ಟಾರ್ ಕಾರ್ಯದರ್ಶಿ ಕಿರಣ್ ಸ್ಯಾಮ್ಯುಯೆಲ್, ಉಪಾಧ್ಯಕ್ಷ ಆನಂದ ಕೋಟಾರ್ಕಿ, ಪ್ರಾಜೆಕ್ಟ್ ಡೈರೆಕ್ಟರ್ ಸಹನಾ ಪಾಟೀಲ್, ಖಜಾಂಚಿ ನಿಹಾಲ್ ಸಿಂಗ್, ಜಾಯಿಂಟ್ ಸೆಕ್ರೆಟರಿ ಭಾವೇಶ ಪಟೇಲ್, ಪ್ರಸನ್ನ ಸಿಂಧೋಲ, ಶಿವರುದ್ರ ಗನ್ಗಂಗಶೆಟ್ಟಿ

=======================

ಇಂದು ನಡೆದ ಉದ್ಯೋಗ ಮೇಳದಲ್ಲಿ ಸುಮಾರು ಐವತ್ತಕ್ಕೂ ಅಧಿಕ ಕಂಪನಿಗಳು ಭಾಗಿಯಾಗಿದ್ದು 1200 ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗಿಯಾಗಿದ್ದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿನ ಈ ನಿರುದ್ಯೋಗ ಹಾಗೂ ಶಿಕ್ಷಣ ಸಮಸ್ಯೆಯನ್ನು ಸರಿಪಡಿಸಲು ರೋಟರಿ ಸಿಲ್ವರ್ ಸ್ಟಾರ್ ಬದ್ಧವಾಗಿದೆ.

ಆದಿಶ್ ವಾಲಿ
ಅಧ್ಯಕ್ಷರು, ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್