ಮಳೆಗೆ ರಸ್ತೆ, ತೋಟಗಳು ಜಲಾವೃತ: ಅಪಾರ ನಷ್ಟ

ತರೀಕೆರೆ, ಅ. ೨೫- ಲಿಂಗದಹಳ್ಳಿ ಹೋಬಳಿಯಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಲಿಂಗದಹಳ್ಳಿಯಿಂದ ಕೆಮ್ಮಣ್ಣುಗುಂಡಿ ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಇಲಾಖಾ ರಸ್ತೆಯ ಮೇಲೆ ಕೆಸರು ನೀರು ಹರಿಯುತ್ತಿದ್ದು, ಕೆಮ್ಮಣ್ಣುಗುಂಡಿ-ಕಲ್ಲತ್ತಿಗಿರಿ ಹೆಬ್ಬೆಪಾಲ್ಸ್‌ಗಳಿಗೆ ತೆರಳುವ ಪ್ರವಾಸಿಗರು ಮತ್ತು ತಣಿಗೆಬೈಲು, ನಂದಿಬಟ್ಟಲು, ದೂಪದಖಾನ್ ಗ್ರಾಮಗಳು ಸೇರಿದಂತೆ ಅನೇಕ ಕಾಫಿ ತೋಟಗಳಿಗೆ ಸಂಚರಿಸುವ ಪ್ರಯಾಣಿಕರುಗಳಿಗೂ ತೀವ್ರ ತೊಂದರೆಯಾಗುತ್ತಿದೆ.


ಎಡೆಬಿಡದೆ ಸುರಿದ ಭಾರೀ ಮಳೆಗೆ ಅಡಿಕೆ, ತೆಂಗಿನ ತೋಟಗಳು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದ ಜಮೀನುಗಳಲ್ಲಿ ನೀರು ತುಂಬಿಕೊಂಡು ೩-೪ ದಿನಗಳವರೆಗೆ ಮಳೆಯ ನೀರು ನಿಂತ ಪರಿಣಾಮ ಮುಸುಕಿನ ಜೋಳ, ರಾಗಿ ಸೇರಿದಂತೆ ಅಲ್ಪಕಾಲಿನ ಬೆಳೆಗಳು ನೀರು ಪಾಲಾಗಿದ್ದು, ಅಡಿಕೆ ತೋಟಗಳಿಗೆ ಕೊಳೆ ರೋಗ ಆವರಿಸಿಕೊಂಡು ಗೊನೆಗಳಿಂದ ಅಡಿಕೆ ನೆಲಕ್ಕೆ ಉದುರಿ ಹೋಗುತ್ತಿರುವುದರಿಂದ ಈ ಭಾಗದ ತೋಟದ ಬೆಳೆಗಾರರುಗಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ ಅನುಭವಿಸುವಂತಾಗಿದೆ.


ಕೂಡಲೇ ಸಂಬಂಧಟ್ಟ ಇಲಾಖಾ ಅಧಿಕಾರಿಗಳು ಜಮೀನುಗಳಿಗೆ ತೆರಳಿ ಅಡಿಕೆ ಸೇರಿದಂತೆ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ತಿಗಡ ಗ್ರಾಮ ಪಂಚಾಯ್ತಿ ಸದಸ್ಯ ತಣಿಗೆಬೈಲು ರಮೇಶ್ ಗೋವಿಂದೇಗೌಡ ಒತ್ತಾಯಿಸಿದ್ದಾರೆ.