ರಸ್ತೆ ಸುರಕ್ಷತೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ

ಸಂಜೆವಾಣಿ ವಾರ್ತ
ಹುಮನಾಬಾದ:ಜ.೨೩:ರಸ್ತೆ ಸುರಕ್ಷತೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಸ್ಥಳೀಯ ಜೆಎಂಎಫ್‌ಸಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಶಾಂತ ಬಾದವಾಡಗಿ ಹೇಳಿದರು.
ಪಟ್ಟಣದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಬಸ್ ಡಿಪೋದಲ್ಲಿ ಗುರುವಾರ ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಭಾಲ್ಕಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಮುಂಜಾಗ್ರತಾ ಅಭಿಯಾನ ಹಾಗೂ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತದೆ. ಜೀವ ಅಮೂಲ್ಯವಾದದ್ದು, ಕ್ಷಣಿಕ ಅಜಾಗರೂಕತೆಯಿಂದ ಕುಟುಂಬಗಳು ಅನಾಥವಾಗುವ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ವಾಹನ ಚಾಲಕರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಭಾಲ್ಕಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಹಮ್ಮದ ಜಾಫರ ಸಾದೀಕ ಮಾತನಾಡಿ, ಚಾಲನಾ ಪರವಾನಗಿ, ವಾಹನದ ದಾಖಲೆಗಳು, ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಬಳಕೆ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಅನಿವಾರ್ಯ. ರಸ್ತೆ ಅಪಘಾತ ತಡೆಗೆ ಸಾರಿಗೆ ಇಲಾಖೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ನಾತೆ ಮಾತನಾಡಿ, ರಸ್ತೆ ಅಪಘಾತ ಪ್ರಕರಣಗಳಲ್ಲಿ ಕಾನೂನು ಸೇವಾ ಸಮಿತಿಯಿಂದ ದೊರೆಯುವ ಉಚಿತ ಕಾನೂನು ನೆರವು, ಪರಿಹಾರ ಪಡೆಯುವ ವಿಧಾನ ಹಾಗೂ ಜನರಿಗೆ ಇರುವ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.
ಸಂಚಾರ ಠಾಣೆಯ ಪಿಎಸ್‌ಐ ಹುಲ್ಲೆಪ್ಪ ಗೌಡಗೊಂಡ ಮಾತನಾಡಿ, ಮದ್ಯಪಾನ ಮಾಡಿ ವಾಹನ ಚಾಲನೆ, ಅತಿವೇಗ, ಮೊಬೈಲ್ ಬಳಕೆ, ತಪ್ಪು ದಿಕ್ಕಿನಲ್ಲಿ ಸಂಚರಿಸುವುದೇ ಅಪಘಾತಗಳಿಗೆ ಪ್ರಮುಖ ಕಾರಣಗಳು. ಇವುಗಳನ್ನು ತಡೆಯುವ ಮೂಲಕವೇ ರಸ್ತೆ ಸುರಕ್ಷತೆಯನ್ನು ಸಾಧಿಸಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಉತ್ತಮ ಚಾಲಕರಿಗೆ ಸಾಂಕೇತಿಕವಾಗಿ ಹೇಲ್ಮೆಟ್ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸ್ ಡಿಪೋ ವ್ಯವಸ್ಥಾಪಕ ರವೀಂದ್ರ ವಹಿಸಿದ್ದರು. ಈ ವೇಳೆ ಡಿಟಿಒ ರಾಜಶೇಖರ, ಡಿಎಮ್ ಇ ಮಂಜುನಾಥ ಸೇರಿದಂತೆ ಸಾರಿಗೆ ಇಲಾಖೆ ಅಧಿಕಾರಿಗಳು, ವಕೀಲರು, ಬಸ್ ಚಾಲಕರು, ನಿರ್ವಾಹಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಗುಂಡರೆಡ್ಡಿ ನಿರೂಪಿಸಿದರು.