ರಸ್ತೆ ರೈಲು ವಿಮಾನ ಸೇವೆಯಿಂದ ಸಂಪರ್ಕ ಕ್ರಾಂತಿ: ಮೋದಿ

ವಾರಣಸಿ,ನ.೮- ದೇಶದ ಪ್ರಗತಿಯಲ್ಲಿ ಮೂಲಸೌಕರ್ಯದ ಪಾತ್ರ ಅತ್ಯಂತ ನಿರ್ಣಾಯಕ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ರಸ್ತೆ, ರೈಲು, ವಿಮಾನಯಾನಸೇವೆ ಸೇರಿದಂತೆ ಸಂಪರ್ಕ ಕ್ರಾಂತಿಗೆ ಮುನ್ನುಡಿ ಬರೆಯಲಾಗಿದ್ದು ದೇಶದಲ್ಲಿ ಅಭಿವೃದ್ಧಿಯ ಹಬ್ಬ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.


ವಾರಣಾಸಿ-ಖಜುರಾಹೊ, ಲಕ್ನೋ-ಸಹಾರನ್‌ಪುರ, ಫಿರೋಜ್‌ಪುರ-ದೆಹಲಿ ಮತ್ತು ಎರ್ನಾಕುಲಂ-ಬೆಂಗಳೂರು ಮಾರ್ಗಗಳಲ್ಲಿ ಹೊಸ ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸಲಿದ್ದು, ದೇಶದ ಹಲವು ಪ್ರದೇಶಗಳಲ್ಲಿ ವೇಗದ ಪ್ರಯಾಣ ಮತ್ತು ಸುಧಾರಿತ ಸಂಪರ್ಕ ಖಚಿತ ಪಡಿಸಲಿವೆ.ಬನಾರಸ್-ಖಜುರಾಹೊ ವಂದೇ ಭಾರತ್ ವಾರಣಾಸಿ, ಪ್ರಯಾಗ್‌ರಾಜ್ ಮತ್ತು ಚಿತ್ರಕೂಟ ಸೇರಿದಂತೆ ಪ್ರಮುಖ ಸಾಂಸ್ಕೃತಿಕ ಮತ್ತು ಧಾರ್ಮಿಕ ತಾಣಗಳನ್ನು ಸಂಪರ್ಕಿಸುತ್ತದೆ ಎಂದು ಹೇಳಿದ್ದಾರೆ.


ದೇಶದ ಆಧುನಿಕ ರೈಲು ಮೂಲಸೌಕರ್ಯ ವಿಸ್ತರಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ಬನಾರಸ್ ರೈಲು ನಿಲ್ದಾಣದಿಂದ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿ ಮಾತನಾಡಿದ ಅವರು ದೇಶಾದ್ಯಂತ ವಿಶ್ವ ದರ್ಜೆಯ, ಹೈ-ಸ್ಪೀಡ್ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಹೊಸ ವಂದೇ ಭಾರತ್ ಸೇವೆಗಳು ಮತ್ತೊಂದು ಮೈಲಿಗಲ್ಲು ಎಂದು ತಿಳಿಸಿದ್ದಾರೆ


ವಂದೇ ಭಾರತ್ ರೈಲುಗಳ ಆರಂಭದಿಂದ ಪ್ರವಾಸೋದ್ಯಮ ಹೆಚ್ಚಳ ಮತ್ತು ಸ್ಥಳೀಯ ಆರ್ಥಿಕತೆ ಉತ್ತೇಜನಕ್ಕೆ ಸಹಕಾರಿಯಾಗಲಿದೆ.ಸೀತಾಪುರ, ಶಹಜಹಾನ್ಪುರ, ಬರೇಲಿ, ಮೊರಾದಾಬಾದ್, ಬಿಜ್ನೋರ್ ಮತ್ತು ಸಹರಾನ್ಪುರ ಸೇರಿದಂತೆ ಪ್ರಮುಖ ನಗರಗಳನ್ನು ಒಳಗೊಂಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಆರಂಭದಿಂದ ದೈನಂದಿನ ಪ್ರಯಾಣಿಕರು ಮತ್ತು ದೂರದ ಪ್ರಯಾಣಿಕರಿಗೆ ಆಧುನಿಕ ಸೌಲಭ್ಯಗಳು ಮತ್ತು ಕಡಿಮೆ ಪ್ರಯಾಣದ ಸಮಯದಲ್ಲಿ ತಲುಪಲು ಸಾಧ್ಯವಾಗಲಿದೆ ಎಂದಿದ್ದಾರೆ.


“ಅಭಿವೃದ್ಧಿಯ ಹಬ್ಬ”ಕ್ಕಾಗಿ ಜನರನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಪಂಚದಾದ್ಯಂತದ ದೇಶಗಳಲ್ಲಿನ ಆರ್ಥಿಕ ಬೆಳವಣಿಗೆ ಮೂಲಸೌಕರ್ಯದಲ್ಲಿನ ಪ್ರಗತಿಯೊಂದಿಗೆ ಬೆಸದುಕೊಂಡಿವೆ. ಮೂಲಸೌಕರ್ಯ ಅಂದರೆ ಕೇವಲ ಭವ್ಯ ಸೇತುವೆಗಳು ಮತ್ತು ಹೆದ್ದಾರಿಗಳನ್ನು ಮೀರಿ ಬೆಳೆದಿದೆ ಎಂದು ತಿಳಿಸಿದ್ದಾರೆ.


ಹೊಸದಾಗಿ ಪ್ರಾರಂಭಿಸಲಾದ ಕಾಶಿ-ಖಜುರಾಹೊ, ಫಿರೋಜ್‌ಪುರ್-ದೆಹಲಿ, ಲಕ್ನೋ-ಸಹಾರನ್‌ಪುರ್ ಮತ್ತು ಎರ್ನಾಕುಲಂ-ಬೆಂಗಳೂರು ಮಾರ್ಗಗಳು ಸೇರಿದಂತೆ ದೇಶಾದ್ಯಂತ ೧೬೦ ಕ್ಕೂ ಹೆಚ್ಚು ರೈಲುಗಳ ಜಾಲ ವಿಸ್ತರಿಸುವುದಾಗಿ ಹೇಳಿದ ಅವರು


ವಂದೇ ಭಾರತ್, ನಮೋ ಭಾರತ್ ಮತ್ತು ಅಮೃತ್ ಭಾರತ್‌ನಂತಹ ರೈಲುಗಳು ಹೊಸ ಪೀಳಿಗೆಯ ಭಾರತೀಯ ರೈಲ್ವೆಗೆ ಅಡಿಪಾಯ ಹಾಕಿವೆ ಎಂದು ತಿಳಿಸಿದ್ದಾರೆ
ಭಾರತದಲ್ಲಿ ತೀರ್ಥಯಾತ್ರೆಗಳ ಆಧ್ಯಾತ್ಮಿಕ ಮತ್ತು ಆರ್ಥಿಕ ಮಹತ್ವದ ಕುರಿತು ಮಾಹಿತಿ ನೀಡಿದ ಪ್ರದಾನಿ ನರೇಂದ್ರ ಮೋದಿ ಅವರು ತೀರ್ಥಯಾತ್ರೆಗಳು ಬಹಳ ಹಿಂದಿನಿಂದಲೂ ದೇಶದ ಆತ್ಮಸಾಕ್ಷಿ ಜಾಗೃತಗೊಳಿಸುವ ಮತ್ತು ಭಾರತದ ಆಧ್ಯಾತ್ಮಿಕತೆಯ ಆತ್ಮವನ್ನು ಬೇರೂರಿಸುವ ಸಾಧನವಾಗಿದೆ ಎಂದು ಹೇಳಿದ್ದಾರೆ.


ಹೊಸ ರೈಲುಗಳು ಪಾರಂಪರಿಕ ನಗರಗಳನ್ನು ಸಂಪರ್ಕಿಸುವುದಲ್ಲದೆ ಅಭಿವೃದ್ಧಿ ವೇಗಗೊಳಿಸುತ್ತವೆ. ಉತ್ತರ ಪ್ರದೇಶವನ್ನು ಉದಾಹರಣೆಯಾಗಿಟ್ಟುಕೊಂಡು, ಕಳೆದ ೧೧ ವರ್ಷಗಳಲ್ಲಿ ನಡೆದ ಅಭಿವೃದ್ಧಿ ಚಟುವಟಿಕೆಗಳು ರಾಜ್ಯದ ಆರ್ಥಿಕತೆಯನ್ನು ಬಲಪಡಿಸಿವೆ. ಕಳೆದ ವರ್ಷವಷ್ಟೇ ೧೧ ಕೋಟಿಗೂ ಹೆಚ್ಚು ಭಕ್ತರು ಬಾಬಾ ವಿಶ್ವನಾಥನ ದರ್ಶನ ಪಡೆದರು ಮತ್ತು ೬ ಕೋಟಿಗೂ ಹೆಚ್ಚು ಜನರು ರಾಮಲಲ್ಲಾ ದರ್ಶನ ಪಡೆದಿದ್ದಾರೆ. ಇದು ರಾಜ್ಯದ ಆರ್ಥಿಕ ಬೆಳವಣಿಗೆಗೆ ಸಾವಿರಾರು ಕೋಟಿ ರೂಪಾಯಿಗಳ ಕೊಡುಗೆ ನೀಡಿದೆ ಎಂದಿದ್ದಾರೆ


ಈ ವೇಳೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನಾಲ್ಕು ಹೊಸ ವಂದೇ ಭಾರತ ಚಾಲನೆ


ದೇಶದಲ್ಲಿ ರೈಲ್ವೆ ರಾಷ್ಟ್ರೀಯ ಜಾಲವನ್ನು ಬಲಪಡಿಸುವ ನಿಟ್ಟಿನಲ್ಲಿ ಬನಾರಸ್-ಖಜುರಾಹೊ, ಲಕ್ನೋ-ಸಹರಾನ್ಪುರ, ಫಿರೋಜ್‌ಪುರ-ದೆಹಲಿ ಮತ್ತು ಎರ್ನಾಕುಲಂ-ಬೆಂಗಳೂರು ಮಾರ್ಗಗಳ ನಡುವೆ ನಾಲ್ಕು ಹೊಸ ವಂದೇ ಭಾರತ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.


ಹೊಸ ವಂದೇ ಭಾರತ್ ರೈಲು ಆರಂಭದಿಂದ ಪ್ರಯಾಣದ ಸಮಯ ಗಮನಾರ್ಹವಾಗಿ ಕಡಿಮೆ ಮಾಡಲು ಮತ್ತು ಸೌಕರ್ಯ ಹೆಚ್ಚಿಸಲು ಸಹಕಾರಿಯಾಗಲಿದೆ. ಪ್ರತಿಯೊಂದು ರೈಲು ಪ್ರಾದೇಶಿಕ ಚಲನಶೀಲತೆಯನ್ನು ಸುಧಾರಿಸುತ್ತದೆ ಎಂದು ಹೇಳಿದ್ದಾರೆ.

ಸುರೇಶ್ ಗೋಪಿ ಸಂವಾದ


ಕೇಂದ್ರ ಸಚಿವ ಮತ್ತು ಬಿಜೆಪಿ ಸಂಸದ ಸುರೇಶ್ ಗೋಪಿ ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ರೈಲಿನಲ್ಲಿ ಮಕ್ಕಳೊಂದಿಗೆ ಸಂವಹನ ನಡೆಸಿ ಶಾಲಾ ಮಕ್ಕಳಿಗೆ ಲೇಟ್‌ಗಳನ್ನು ವಿತರಿಸಿದರು.


ಬನಾರಸ್-ಖಜುರಾಹೊ ವಂದೇ ಭಾರತ್ ಎಕ್ಸ್‌ಪ್ರೆಸ್ ವಾರಣಾಸಿ, ಪ್ರಯಾಗ್‌ರಾಜ್, ಚಿತ್ರಕೂಟ ಮತ್ತು ಖಜುರಾಹೊದಂತಹ ಪ್ರಮುಖ ಸಾಂಸ್ಕೃತಿಕ ಮತ್ತು ಧಾರ್ಮಿಕ ತಾಣ ಸಂಪರ್ಕಿಸುತ್ತದೆ. ಅಸ್ತಿತ್ವದಲ್ಲಿರುವ ಸೇವೆಗಳಿಗೆ ಹೋಲಿಸಿದರೆ ಮಾರ್ಗ ಸುಮಾರು ೨ ಗಂಟೆ ೪೦ ನಿಮಿಷ ಸಮಯ ಉಳಿತಾಯ ಮಾಡಲಿದೆ.

ಈ ರೈಲು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಖಜುರಾಹೊಗೆ ಭೇಟಿ ನೀಡುವ ಯಾತ್ರಿಕರಿಗೆ ಪ್ರಯಾಣವನ್ನು ವೇಗವಾಗಿ ಮತ್ತು ಹೆಚ್ಚು ಅನುಕೂಲಕರವಾಗಿಸುತ್ತದೆ ಮತ್ತು ಮಧ್ಯ ಭಾರತದಾದ್ಯಂತ ಪರಂಪರೆ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.