ಆಧುನಿಕ ಸಾಹಿತ್ಯ ಕ್ಷೇತ್ರದ ಋಷಿ ಎಸ್.ಎಲ್ ಭೈರಪ್ಪ : ಓಂಪ್ರಕಾಶ ದಡ್ಡೆ

ಔರಾದ್ : ಸೆ.27:ತನ್ನ ವಿಶಿಷ್ಟ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಲೋಕ ಉತ್ಕøಷ್ಟಗೊಳಿಸಿದ ಡಾ.ಎಸ್.ಎಲ್ ಭೈರಪ್ಪ ಅವರಿಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಘೋಷಣೆ ಮಾಡಲಿ ಎಂದು ಸಾಹಿತಿ, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಓಂಪ್ರಕಾಶ ದಡ್ಡೆ ಆಗ್ರಹಿಸಿದ್ದಾರೆ.

ಪಟ್ಟಣದ ಕನ್ನಡ ಭವನದಲ್ಲಿ ಶುಕ್ರವಾರ ಕಸಾಪ ಆಯೋಜಿಸಿದ ಎಸ್.ಎಲ್ ಭೈರಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವು ಕಾದಂಬರಿಗಳು ಬರೆದ ಅವರು ಆಧುನಿಕ ಸಾಹಿತ್ಯ ಕ್ಷೇತ್ರದ ಋಷಿಯಂತೆ ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದಾರೆ.

ಸಮಾಜದ ಜ್ಯೋತಿಯಾಗಿ ಸದಾ ಪ್ರಜ್ವಲಿಸುವ ಅವರ ವಿಚಾರಗಳು ಕನ್ನಡಿಗರ ಪ್ರಜ್ಞಾವಂತಿಕೆಗೆ ಸಾಕ್ಷಿ ಎಂಬಂತಿದೆ. ಜೀವನದುದ್ದಕ್ಕೂ ಸಾಹಿತ್ಯವೇ ಉಸಿರಾಗಿಸಿಕೊಂಡು ಬದುಕಿದ ಅವರ ಕಾದಂಬರಿಗಳ ಖರೀದಿಗೆ ಜನ ಸಾಲುಗಟ್ಟಿ ನಿಲ್ಲುತ್ತಿರುವುದು ಆಧುನಿಕ ಯುಗದ ಆಶ್ಚರ್ಯವೆಂದರೂ ತಪ್ಪಾಗದು ಎಂದರು.

ಚಿಂತಕ ಜಗನ್ನಾಥ ಮೂಲಗೆ ಮಾತನಾಡಿ, ಕನ್ನಡ ನಾಡು ಒಬ್ಬ ಶ್ರೇಷ್ಠ ಸಾಹಿತಿಯನ್ನು ಕಳೆದುಕೊಂಡು ಬಡವಾಗಿದೆ. ಅವರ ಕೃತಿಗಳು ಕನ್ನಡವಲ್ಲದೇ ಇನ್ನಿತರ ಭಾಷೆಗಳಲ್ಲಿ ಅನುವಾದಗೊಂಡಿವೆ. ಕನ್ನಡ ಮಾತ್ರವಲ್ಲದೇ ಮರಾಠಿ, ಇಂಗ್ಲಿಷ್, ಹಿಂದಿ ಭಾಷಿಕರನ್ನು ಓದುಗರಾಗಿ ಪಡೆದ ಕೀರ್ತಿ ಎಸ್.ಎಲ್ ಭೈರಪ್ಪ ಅವರಿಗೆ ಸಲ್ಲುತ್ತದೆ ಎಂದರು.

ಕಸಾಪ ಗೌರವಾಧ್ಯಕ್ಷ ಡಾ. ವೈಜಿನಾಥ ಬುಟ್ಟೆ, ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ, ಗೌರವ ಕಾರ್ಯದರ್ಶಿ ಜಗನ್ನಾಥ ದೇಶಮುಖ ಮಾತನಾಡಿ ಎಸ್.ಎಲ್ ಭೈರಪ್ಪನವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಅತೀವ ನಷ್ಟ ಉಂಟಾಗಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾದ ಅಮೃತರಾವ ಬಿರಾದಾರ, ಕಲ್ಯಾಣರಾವ ಶೆಂಬೆಳ್ಳೆ, ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ್, ಮಾಧ್ಯಮ ಪ್ರತಿನಿಧಿ ಅಮರಸ್ವಾಮಿ ಸ್ಥಾವರಮಠ, ಸಂಘಟನಾ ಕಾರ್ಯದರ್ಶಿ ಆನಂದ ದ್ಯಾಡೆ, ಕರವೇ ಅಧ್ಯಕ್ಷ ಅನೀಲ ದೇವಕತೆ, ಶಿವಕುಮಾರ ಪಾಟೀಲ್, ಬಸವರಾಜ ಚೌಕಂಪಳ್ಳೆ, ಪಪ್ಪು ಹಕ್ಕೆ ಸೇರಿದಂತೆ ಇನ್ನಿತರರಿದ್ದರು.