ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಹಕ್ಕುಗಳು ಅಗತ್ಯ

ಕಲಬುರಗಿ :ನ.20: ಮಾನವ ಹಕ್ಕುಗಳ ಜೊತೆಗೆ ಮಕ್ಕಳ ಹಕ್ಕುಗಳಾದ ಬದುಕುವ ಹಕ್ಕು,ಹೆಸರಿನ ಹಕ್ಕು , ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು, ಚಿಂತನೆಯ ಸ್ವಾತಂತ್ರ್ಯ, ಆತ್ಮಸಾಕ್ಷಿಯ ಮತ್ತು ಧರ್ಮದ ಹಕ್ಕು , ಆರೋಗ್ಯ ರಕ್ಷಣೆಯ ಹಕ್ಕು , ಆರ್ಥಿಕ ಮತ್ತು ಲೈಂಗಿಕ ಶೋಷಣೆಯಿಂದ ರಕ್ಷಣೆಯ ಹಕ್ಕು ಮತ್ತು ಶಿಕ್ಷಣದ ಹಕ್ಕುಗಳು, ಮನರಂಜನೆ ಮತ್ತು ಆಟೋಟಗಳಲ್ಲಿ ಭಾಗವಹಿಸುವ ಹಕ್ಕುಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾಗಿವೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ್ ಹೇಳಿದರು. ಮಹಾಗಾಂವ ಕ್ರಾಸ್ ಸಮೀಪವಿರುವ ‘ಚಿಗುರು ನಿರ್ಗತಿಕ ಅನಾಥ ಮಕ್ಕಳ ನಿಲಯ’ದಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ವಿಶ್ವ ಮಕ್ಕಳ ಹಕ್ಕುಗಳ ದಿನಾಚರಣೆ”ಯಲ್ಲಿ ಅವರು ಮಾತನಾಡುತ್ತಿದ್ದರು. ಮಕ್ಕಳು ಭವಿಷ್ಯದ ಪ್ರಜೆಗಳು ಮಾತ್ರವಲ್ಲ, ಅತ್ಯಮೂಲ್ಯ ಸಂಪತ್ತು ಮತ್ತು ಭವಿಷ್ಯದ ಅತ್ಯುತ್ತಮ ಭರವಸೆ ಕೂಡ ಹೌದು. ಹೀಗಿರುವಾಗ ಸದೃಢ ರಾಷ್ಟ್ರ ರಾಷ್ಟ್ರ ನಿರ್ಮಾಣವಾಗಬೇಕಾದರೆ, ಜಗತ್ತು ಸಕಾರಾತ್ಮಕ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಮಕ್ಕಳನ್ನು ಸಶಕ್ತಗೊಳಿಸುವುದು ಮುಖ್ಯ. ಆದ್ದರಿಂದ ಮಕ್ಕಳು ಆರೋಗ್ಯವಂತ, ವಿದ್ಯಾವಂತ ಮತ್ತು ಪ್ರಜ್ಞಾವಂತ ನಾಗರಿಕರಾಗಿ ಬೆಳೆಯಬೇಕು ಎಂಬ ಕಾರಣಕ್ಕಾಗಿ ಹಾಗೂ ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ, ಆರೋಗ್ಯ, ಆಟ, ಸುರಕ್ಷತೆ ಮತ್ತು ಸಬಲೀಕರಣವನ್ನು ಉತ್ತೇಜಿಸುವ ಸಲುವಾಗಿ ಪ್ರತಿವರ್ಷ ‘ನವೆಂಬರ್ -20’ರಂದು “ಸಾರ್ವತ್ರಿಕ ಮಕ್ಕಳ ಹಕ್ಕುಗಳ ದಿನಾಚರಣೆ”ಯನ್ನು ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ವೃದ್ಧಾಶ್ರಮದ ಮುಖ್ಯಸ್ಥ ಶರಣು ಎ.ಕಮಠಾಣ ಹಾಗೂ ಮಕ್ಕಳು, ವಯೋವೃದ್ಧರು ಇದ್ದರು.