Home ಜಿಲ್ಲೆ ಎನ್‍ಎಸ್‍ಎಸ್‍ಕೆ ಪುನ:ಶ್ಚೇತನ: ಪ್ರಧಾನಿ, ಸಹಕಾರ ಸಚಿವರಿಗೆ ದೇವೇಗೌಡ ಪತ್ರ

ಎನ್‍ಎಸ್‍ಎಸ್‍ಕೆ ಪುನ:ಶ್ಚೇತನ: ಪ್ರಧಾನಿ, ಸಹಕಾರ ಸಚಿವರಿಗೆ ದೇವೇಗೌಡ ಪತ್ರ

ಬೀದರ್: ನಾರಂಜಾ ಸಹಕಾರ ಸಕ್ಕರೆ ಕಾರಖಾನೆಯ ಪುನ:ಶ್ಚೇತನಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಸಹಕಾರ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯುವ ಮೂಲಕ ಕಾರಖಾನೆ ಹಾಗೂ ರೈತರ ಹಿತರಕ್ಷಿಸುವ ಪ್ರಯತ್ನವನ್ನು ಮುಂದುವರೆಸಿದ್ದಾರೆ.
ಆರ್ಥಿಕ ಸಂಕಟದಲ್ಲಿ ಸಿಲುಕಿರುವ ನಾರಂಜಾ ಸಹಕಾರಿ ಸಕ್ಕರೆ ಕಾರಖಾನೆಯನ್ನು ಸಶಕ್ತಗೊಳಿಸಲು ಕಾರಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಪ್ರಯತ್ನಿಸುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರು ಸೂರ್ಯಕಾಂತ ನಾಗಮಾರಪಳ್ಳಿ ಅವರ ಪ್ರಯತ್ನಕ್ಕೆ ಇನ್ನಷ್ಟು ಶಕ್ತಿ ತುಂಬಿದ್ದಾರೆ. ಮಾಜಿ ಪ್ರಧಾನಿಯವರ ಈ ಪ್ರಯತ್ನವು ರೈತರಲ್ಲಿ, ಕಾರ್ಮಿಕರಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ವಿಶೇಷವಾಗಿ ಕಾರಖಾನೆಯ ಪುನ:ಶ್ಚೇತನದ ಸಾಧ್ಯತೆಯನ್ನು ಹೆಚ್ಚಿಸಿದೆ.
ನಾರಂಜಾ ಕಾರಖಾನೆಯ ಆರ್ಥಿಕ ಸಮಸ್ಯೆ, ಅದರ ಹಿಂದಿರುವ ಕಾರಣಗಳು, ಈ ಕಾರಖಾನೆಯಿಂದ ಬೀದರ್ ಜಿಲ್ಲೆಯ ರೈತರಿಗೆ ಆಗುತ್ತಿರುವ ಅನುಕೂಲ, ಉದ್ಯೋಗಾವಕಾಶ, ಆರ್ಥಿಕಾಭಿವೃದ್ಧಿ ಮುಂತಾದ ವಿಷಯಗಳನ್ನು ಒಳಗೊಂಡ ವಿವರವಾದ ಮನವಿಪತ್ರವನ್ನು ಕಾರಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಸಲ್ಲಿಸಿದ್ದರು. ಇದಕ್ಕೆ ತ್ವರಿತವಾಗಿ ಸ್ಪಂದಿಸಿದ ಮಾಜಿ ಪ್ರಧಾನಿಯವರು ಅಕ್ಟೋಬರ್ 7 ರಂದೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಸಹಕಾರ ಸಚಿವ ಅಮಿತ್ ಶಾ ಅವರಿಗೆ ಪ್ರತ್ಯೇಕ ಪತ್ರ ಬರೆದು, ಕಾರಖಾನೆಯ ಪುನ:ಶ್ಚೇತನದ ಬೇಡಿಕೆಗೆ ಸ್ಪಂದಿಸುವಂತೆ ಕೋರಿದ್ದಾರೆ.
ರೈತರಿಂದ ರೈತರಿಗಾಗಿ ಎಂಬ ತತ್ವವನ್ನು ಅನುಸರಿಸಿಕೊಂಡು ಬರುತ್ತಿರುವ ನಾರಂಜಾ ಕಾರಖಾನೆಯು ದಶಕಗಳಿಂದ ಈ ಭಾಗದ ಕಬ್ಬು ಬೆಳೆಗಾರರು, ಕಾರ್ಮಿಕರು ಮತ್ತು ಗ್ರಾಮೀಣ ಸಮುದಾಯಗಳಿಗೆ ಆಸರೆಯಾಗಿದೆ. ಆರ್ಥಿಕ ಸವಾಲುಗಳ ನಡುವೆಯೂ ಸದಸ್ಯ ರೈತರಿಗೆ ಎಫ್‍ಆರ್‍ಪಿಗಿಂತ ಅಧಿಕ ಕಬ್ಬಿನ ಬೆಲೆ ಪಾವತಿಸಿದೆ, ಷೇರುದಾರ ರೈತರಿಗೆ ಉಚಿತವಾಗಿ ಸಕ್ಕರೆ ವಿತರಿಸಿದೆ. ಆರಂಭದಿಂದಲೂ ರೈತರ ಹಿತಕ್ಕಾಗಿ, ರೈತರ ಆರ್ಥಿಕಾಭಿವೃದ್ದಿಗಾಗಿ ಶ್ರಮಿಸುತ್ತಿದೆ ಎಂದು ಮಾಜಿ ಪ್ರಧಾನಿಯವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆರಂಭಿಕ ರೂ. 57.90 ಕೋಟಿ ಸಾಲದ ಮೇಲಿನ ಬಡ್ಡಿಯಿಂದಾಗಿ ಇಂದು ಸುಮಾರು ರೂ.668 ಕೋಟಿ ರೂ. ಬಾಕಿ ಹೊಣೆಗಾರಿಕೆ ಸೃಷ್ಟಿಯಾಗಿದೆ. ತೀವ್ರ ಕಷ್ಟದಲ್ಲಿ ಸಿಲುಕಿರುವ ಈಕಾರಖಾನೆಗೆ ಸಕ್ಕರೆ ಅಭಿವೃದ್ಧಿನಿಧಿ ಮತ್ತು ರಾಷ್ಟ್ರೀಯ ಸಹಕಾರ ಅಭಿವೃದ್ದಿ ನಿಗಮ (ಎನ್‍ಸಿಡಿಸಿ) ಮೂಲಕ ಆರ್ಥಿಕ ಬೆಂಬಲ ನೀಡಬೇಕು ಎಂದು ದೇವೇಗೌಡ ಅವರು ಕೋರಿದ್ದಾರೆ.
ಆರ್ಥಿಕ ಸಂಕಟದಲ್ಲಿ ಸಿಲುಕಿರುವ ಸಹಕಾರಿ ಸಕ್ಕರೆ ಕಾರಖಾನೆಗಳಿಗೆ ದಾಮ್ ದುಪ್ಪಟು ಆಧಾರಿತ ಬಡ್ಡಿ ಮನ್ನಾ ಮತ್ತು ಕೈಗೆಟುಕುವ ಏಕಕಾಲ ತಿರುವಳಿಯ ಅವಕಾಶ ನೀಡುವಂತೆಯೂ ಮಾಜಿ ಪ್ರಧಾನಿಯವರು ಕೋರಿದ್ದಾರೆ.
ರಾಷ್ಟ್ರೀಯ ಸಹಕಾರ ನೀತಿ 2025 ಮತ್ತು ಇತರ ರಾಜ್ಯಗಳಲ್ಲಿ ಜಾರಿಗೆ ತರಲಾದ ಇಂತಹದೇ ಒಟಿಎಸ್ ಕ್ರಮಗಳನ್ನು ಮಾಜಿ ಪ್ರಧಾನಿಯವರು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ನಾರಂಜಾ ಕಾರಖಾನೆಗೂ ಇದೇ ಮಾದರಿಯಲ್ಲಿ ಒಟಿಎಸ್ ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.
2026-27ರ ಕಬ್ಬು ನುರಿಸುವ ಹಂಗಾಮಿಗಾಗಿ ಈ ಸುಮಾರು 40,000 ಎಕರೆ ಕಬ್ಬು ನೋಂದಣಿಯಾಗಿದ್ದು, ಕಾರ್ಯಾಚರಣೆ ಪುನರಾರಂಭಿಸಲು ನಾರಂಜಾ ಕಾರಖಾನೆ ಸಿದ್ದವಾಗಿದೆ. ರೈತರ ಆರ್ಥಿಕಾಭಿವೃದ್ದಿಗಾಗಿ ಶ್ರಮಿಸುತ್ತಿರುವ ಈ ಕಾರಖಾನೆಗೆ ಎನ್‍ಸಿಡಿಸಿಯಿಂದ ಆರ್ಥಿಕ ನೆರವು ನೀಡಬೇಕು. ಆ ಮೂಲಕ ಕಾರಖಾನೆಯನ್ನು ಸಶಕ್ತಗೊಳಿಸಬೇಕು. ಕಾರಖಾನೆ ಸಶಕ್ತಗೊಂಡಲ್ಲಿ ರೈತರಿಗೆ, ಕಬ್ಬು ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸೂರ್ಯಕಾಂತ್ ಕೃತಜ್ಞತೆ
ಆರಂಭದಿಂದಲೂ ಮಾಜಿ ಪ್ರಧಾನಿ ಎಚ್‍ಡಿ. ದೇವೇಗೌಡ ಅವರು ನಾರಂಜಾ ಸಹಕಾರ ಸಕ್ಕರೆ ಕಾರಖಾನೆಯ ಪುನ:ಶ್ಚೇತನದ ಬೇಡಿಕೆಗೆ ಸ್ಪಂದಿಸುತ್ತ ಬಂದಿದ್ದಾರೆ. ಪ್ರಧಾನಿಯವರಿಗೆ, ಕೇಂದ್ರದ ಸಹಕಾರ ಸಚಿವರಿಗೆ ಪತ್ರ ಬರೆಯುವ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಮಾಜಿ ಪ್ರಧಾನಿಯವರ ಈ ಸಹಕಾರ ಸ್ಮರಣೀಯವಾಗಿದೆ ಎಂದು ಕಾರಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿನ ಸಂಸ್ಥೆಗಳು ಉಳಿಯಬೇಕು ಎಂಬ ದೇವೇಗೌಡ ಅವರ ಕಾಳಜಿಯು ಅನುಕರಣೀಯವಾಗಿದೆ. ಇದಕ್ಕಾಗಿ ಕಾರಖಾನೆ ಪರವಾಗಿ,ಜಿಲ್ಲೆಯ ರೈತರ ಪರವಾಗಿ ಕೃತಜ್ಞತೆ ಸಲ್ಲಿಸಲಾಗುತ್ತದೆ ಎಂದು ಸೂರ್ಯಕಾಂತ್ ತಿಳಿಸಿದ್ದಾರೆ.