
ಕಾಳಗಿ:ಮಾ.2:ಚಿಂಚೋಳಿ ಮತಕ್ಷೇತ್ರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕಲ್ಯಾಣ ಕರ್ನಾಟಕದ ಕೈಲಾಸ ಶ್ರೀಕ್ಷೇತ್ರ ರೇವಗ್ಗಿ (ರಟಕಲ್)ಗ್ರಾಮದ ಆರಾಧ್ಯ ದೈವನಾದ ಜಗದ್ಗುರು ಶ್ರೀರೇವಣಸಿದ್ದೇಶ್ವರರ ಜಯಂತೋತ್ಸವವನ್ನು ಭಕ್ತರು ಭಾನುವಾರ ಭಕ್ತಿ-ಭಾವ ಹಾಗೂ ಸಂಭ್ರಮದಿಂದ ಆಚರಿಸಿದರು.
ಜಗದ್ಗುರು ರೇಣುಕಾಚಾರ್ಯರ ಜಯಂತಿ
ನಿಮಿತ್ತವಾಗಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಶನಿವಾರ ರಾತ್ರಿಯಿಂದ ಬೆಳಗಿನ ಜಾವದ ವರೆಗೆ ಸೂಗುರ(ಕೆ) ಡಾ.ಚನ್ನರುದ್ರಮುನಿ ಶಿವಾಚಾರ್ಯರು, ರಟಕಲ ಪೂಜ್ಯ ರೇವಣಸಿದ್ದ ಶಿವಾಚಾರ್ಯರು, ಪೂಜ್ಯ ನೀಲಕಂಠ ದೇವರು ಹಾಗೂ ಚಿಂಚನಸೂರ ಶ್ರೀಗಳ ಸಾನ್ನಿಧ್ಯದಲ್ಲಿ ಆಕಾಶವಾಣಿ ಕಲಾವಿದರಿಂದ ಸಂಗೀತ, ಭಜನೆ ಕಾರ್ಯಕ್ರಮ ಜರುಗಿತು.
ರವಿವಾರ ಬೆಳಗ್ಗೆ ಅಮೃತಸಿದ್ದಿ ಯೋಗದಲ್ಲಿ ಆರ್ಚಕರಿಂದ ರೇವಣಸಿದ್ದೇಶ್ವರ ಮೂರ್ತಿಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ಜರುಗಿತು.
ನಂತರ ದೇವಸ್ಥಾನ ಆವರಣದಲ್ಲಿ ರಟಕಲ ಪೂಜ್ಯ ರೇವಣಸಿದ್ದ ಶಿವಾಚಾರ್ಯರ ನೇತೃತ್ವದಲ್ಲಿ ರಾಚೋಟೇಶ್ವರ ವೈದಿಕ ಬಳಗದ ಪ್ರಮುಖ ವಿವೇಕಾನಂದ ಬಸವನಗುಡಿ ರೇವಗ್ಗಿ ವೈದಿಕತ್ವದಲ್ಲಿ ಜಂಗಮ ವಟುಗಳಿಗೆ ಅಯ್ಯಾಚಾರ ಲಿಂಗದೀಕ್ಷೆ ನೀಡಲಾಯಿತು.
ಮುತ್ತೈದೆಯರು ರೇಣುಕಾಚಾರ್ಯರನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡಿದರು.
ಸಂಜೆ ರೇವಗ್ಗಿ ಗ್ರಾಮದ ದೇವರಮನಿ ಅವರ ಮನೆಯಿಂದ ಕುಂಭದ ಮೆರವಣಿಗೆ ಹಾಗೂ ರೇವಗ್ಗಿ, ರಟಕಲ್, ಮುಕರಂಬ, ಗೊಣಗಿ, ಮಾವಿನಸೂರ, ಅರಣಕಲ್, ಕಂದಗೂಳ, ಭೆಡಸೂರ ಗ್ರಾಮಗಳಿಂದ
ನಂದಿಕೋಲು, ಕಳಸ, ಮಿಣಿಯನ್ನು ಡೊಳ್ಳು ಭಾಜಾ- ಭಜಂತ್ರಿಗಳ ಮಧ್ಯೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು.
ಶ್ರೀರೇವಣಸಿದ್ದೇಶ್ವರ ಗದ್ದುಗೆ ಪೂಜೆ ಸಲ್ಲಿಸಿ ರೇವಣಸಿದ್ದೇಶ್ವರ ಮೂರ್ತಿ ರಥದತ್ತ ತಲುವುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಜೆ ವಿಜೃಂಭಣೆಯಿಂದ ಭವ್ಯ ರಥೋತ್ಸವ ಜರುಗಿತು.
ನಿರಗುಡಿಯ ಪೂಜ್ಯ ಹವಾಮಲ್ಲಿನಾಥ ಮಹಾರಾಜ, ರಟಕಲ್ ಪೂಜ್ಯ ರೇವಣಸಿದ್ದ ಶಿವಾಚಾರ್ಯರು, ಪೂಜ್ಯ ನೀಲಕಂಠ ದೇವರು, ಗೌರಿಗುಡ್ಡದ ರೇವಣಸಿದ್ಧ ಶರಣರು, ಚಂದನಕೇರ ಪೂಜ್ಯ ಅಭಿವನ ರಾಚೋಟೇಶ್ವರ ಶಿವಾಚಾರ್ಯರು, ಸೇಡಂ ಸಹಾಯಕ ಆಯುಕ್ತರು ಹಾಗೂ ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಭುರೆಡ್ಡಿ, ತಹಶಿಲ್ದಾರ ನಾಗನಾಥ ತರಗೆ, ದೇವಸ್ಥಾನ ಕಾರ್ಯದರ್ಶಿ ಸದಾಶಿವ ವಗ್ಗೆ, ಶಿವರಾಜ ಪಾಟೀಲ ಗೊಣಗಿ, ಗಂಗಾಧರ ಬಸವನಗುಡಿ, ಶಂಕರ ಚೌಕಾ, ಸಾಗರ ಮಾವಿನಸೂರ, ರುದ್ರಶೆಟ್ಟಿ ಗುರಮಿಠಕಲ, ದಯಾಸಾಗರ ಪಾಟೀಲ, ನಾಗಣ್ಣ ಮೊಳಜಿ ಸೇರಿದಂತೆ ಸಾವಿರಾರು ಭಕ್ತರು ಇದ್ದರು.



























