ಜನರ ಧ್ವನಿ-ಮಾಧ್ಯಮದ ಒತ್ತಡಕ್ಕೆ ಸ್ಪಂದನೆ:ಆಳಂದ್‍ನ ಹದಗೆಟ್ಟ ಹೆದ್ದಾರಿ ದುರಸ್ತಿಗೆ ಕಾರ್ಯಾರಂಭ

ಆಳಂದ:ಅ.26: ಪಟ್ಟಣದಲ್ಲಿ ಹಲವು ತಿಂಗಳುಗಳಿಂದ ತೀವ್ರ ಹದಗೆಟ್ಟಿದ್ದ ರಸ್ತೆಯ ದುಸ್ಥಿತಿ ಮತ್ತು ಅಪಘಾತಗಳ ಆತಂಕಕ್ಕೆ ಮುಕ್ತಾಯ ತರುವಂತೆ, ಸ್ಥಳೀಯ ಸಾರ್ವಜನಿಕರ ಕೂಗು ಹಾಗೂ ಮಾಧ್ಯಮ ವರದಿಗಳು ಆಡಳಿತವನ್ನು ಎಚ್ಚರಿಸಿದ್ದು, ಕೊನೆಗೂ ರಾಜ್ಯ ಹೆದ್ದಾರಿ ದುರಸ್ತಿ ಕಾಮಗಾರಿ ಆರಂಭವಾಗಿದೆ.
ದರ್ಗಾ ಚೌಕದಿಂದ ಬಸ್ ನಿಲ್ದಾಣ ಮಾರ್ಗದ ಮೂಲಕ ಸಿದ್ಧಾರ್ಥ್ ಚೌಕ್ ವರೆಗಿನ ಸುಮಾರು 950 ಮೀಟರ್ ಉದ್ದದ ಹೆದ್ದಾರಿಯಲ್ಲಿ ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ ಕಾಮಗಾರಿ ಏಜೆನ್ಸಿ ಮೂಲಕ ಕಾರ್ಮಿಕರು ತೊಡಗಿಕೊಂಡಿದ್ದಾರೆ. ಈ ಅಭಿವೃದ್ಧಿ ಸಾರ್ವಜನಿಕರಲ್ಲಿ ಆಶಾಕಿರಣ ಹುಟ್ಟಿಸಿದ್ದು, “ಮಾಧ್ಯಮದ ಧ್ವನಿ ಕೇಳಿತು” ಎಂಬ ಧ್ವನಿ ಕೇಳಿಬರುತ್ತಿದೆ.
ಪಟ್ಟಣದ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಂದರ್ಭದಲ್ಲಿ ಶಾಸಕ ಬಿ ಆರ್ ಪಾಟೀಲ್ ಅವರು ಅಧಿಕಾರಿಗಳು ತುರ್ತು ಹೆದ್ದಾರಿ ಕಾಮಗಾರಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಈ ಕಾಮಗಾರಿ ಆರಂಭಗೊಂಡು ಜನತೆಗೆ ಸಂತಸ ತಂದಿದೆ ಆದರೆ ಗುಣಮಟ್ಟದ ಕಾಮಗಾರಿ ನಡೆಯಲಿ ಎಂದು ಒತ್ತಾಯಿಸಿದ್ದಾರೆ

ಮೊದಲ ಹಂತದಲ್ಲಿ 900 ಮೀಟರ್ ಕಾಮಗಾರಿ:
ರಸ್ತೆ ಉದ್ದಕ್ಕೂ ತೊಂದರೆಗೆ ಪರಿಹಾರ ಸ್ಥಳೀಯ ಲೋಕೋಪಯೋಗಿ ಇಲಾಖೆಯ ಲೆಕ್ಕ ಶಿರಸಿಕೆ ಅನುದಾನದಡಿಯಲ್ಲಿ ಕೈಗೊಂಡ ಈ ದುರಸ್ತಿ ಕಾರ್ಯವು ಮೊದಲ ಹಂತದಲ್ಲಿ 900 ಮೀಟರ್ ಉದ್ದವನ್ನು ಒಳಗೊಂಡಿದ್ದು, ಇದು ದರ್ಗಾ ಚೌಕ್, ಬಸ್ ನಿಲ್ದಾಣದಿಂದ ಸಿಪಿಎಸ್ ಶಾಲೆಯವರೆಗೆ ವಿಸ್ತರಿಸುತ್ತದೆ. ಉಳಿದಂತೆ ಸಿದ್ಧಾರ್ಥ್ ಚೌಕ್‍ನ ಸುಮಾರು 50 ಮೀಟರ್ ಭಾಗದಲ್ಲಿ ದೊಡ್ಡ ದೊಡ್ಡ ಗುಂಡಿಗಳನ್ನು ತುರ್ತು ಮುಚ್ಚುವ ಕಾರ್ಯ ಜಾರಿಗೊಳ್ಳಲಿದೆ ಎಂದು ಇಲಾಖೆಯ ಜೂನಿಯರ್ ಎಂಜಿನಿಯರ್ ಅವರು ತಿಳಿಸಿದ್ದಾರೆ. “ನಾವು ಉತ್ತಮ ಗುಣಮಟ್ಟದ ಟಾರ್ ಸಾಮಗ್ರಿಯನ್ನು ಬಳಸಿ, ರಸ್ತೆಯನ್ನು ಸಂಪೂರ್ಣವಾಗಿ ಸುಗಮಗೊಳಿಸುತ್ತೇವು. ಕಾಮಗಾರಿ ಒಂದು ವಾರದೊಳಗೆ ಪೂರ್ಣಗೊಳ್ಳಲಿದ್ದು, ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗದಂತೆ ನಡೆಸುತ್ತೇವು” ಎಂದು ಅವರು ಹೇಳಿದರು.
ಪಟ್ಟಣದ ಹೃದಯಭಾಗವಾಗಿರುವ ಈ ಹೆದ್ದಾರಿಯು ತೀವ್ರ ಹದಗೆಟ್ಟು ಧೂಳು ಮತ್ತು ಗುಂಡಿಗಳಿಂದ ಕಂಗಾಲಾಗಿತ್ತು. ಹಿಂದಿನ ತಿಂಗಳುಗಳಲ್ಲಿ ದರ್ಗಾ ಚೌಕದಿಂದ ಸಿದ್ಧಾರ್ಥ್ ಚೌಕ್ ವರೆಗಿನ ಮಾರ್ಗದಲ್ಲಿ ದ್ವಿಚಕ್ರ ವಾಹನಗಳ ಸಣ್ಣಪುಟ್ಟ ಅಪಘಾತಗಳು ಮತ್ತು ವಾಹನಗಳ ತೆಗ್ಗುಗಳು ಸಾಮಾನ್ಯವಾಗಿದ್ದವು. ಮಳೆಗಾಲದಲ್ಲಿ ಕೆಸರುಗದ್ದೆಯಂತಾಗಿ ಸಂಚಾರವೇ ಅಸಾಧ್ಯವಾಗುತ್ತಿತ್ತು. ಇಲಾಖೆಯ ಅಧಿಕಾರಿಗಳ ಪ್ರಕಾರ, ಈ ಕಾಮಗಾರಿಯು ಅಂದಾಜು ಮೊತ್ತ ತಿಳಿಸಲಾಗುವುದೆಂದು ಪುನಃ ಅವರು ವಿವರಣೆ ನೀಡಲಿಲ್ಲ
ಸಾರ್ವಜನಿಕರ ಒತ್ತಾಯ ಮತ್ತು ಮಾಧ್ಯಮದ ಪಾತ್ರ: ‘ಧ್ವನಿ ಕೇಳಿತು’ ಎಂದು ಆಶಾಕಿರಣ ವ್ಯಕ್ತವಾಗಿದೆ.
ಈ ಕಾಮಗಾರಿಯ ಹಿನ್ನೆಲೆಯಲ್ಲಿ, ಇತ್ತೀಚಿನ ಮಾಧ್ಯಮ ವರದಿಗಳು ಮುಖ್ಯ ಪಾತ್ರ ವಹಿಸಿವೆ. ವಾರದ ಹಿಂದೆ ಪ್ರಕಟವಾದ ವರದಿಗಳಲ್ಲಿ ರಸ್ತೆಯ ದುಸ್ಥಿತಿ, ಸಂಚಾರ ಅರಾಜಕತೆ ಮತ್ತು ಅಪಘಾತಗಳ ಬಗ್ಗೆ ವಿವರಿಸಲಾಗಿತ್ತು. ಇದರಿಂದ ಆಡಳಿತವು ಎಚ್ಚರಗೊಂಡು ತಕ್ಷಣ ಕ್ರಮ ಕೈಗೊಂಡಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಸ್ಥಳೀಯ ನಿವಾಸಿ ಗೊಳ್ಳೊಳ್ಳಿಯ ಸೈಫಾನ ಪಟೇಲ್ ಅವರು ಹೇಳುವಂತೆ, “ಈ ರಸ್ತೆಯಲ್ಲಿ ಸರ್ಕಸ್ ಮಾಡುವಂತಿತ್ತು. ಮಾಧ್ಯಮವು ನಮ್ಮ ತೊಂದರೆಯನ್ನು ಎತ್ತಿ ತೋರಿಸಿದ್ದರಿಂದ ಕೊನೆಗೆ ಕ್ರಮ ಕಂಡುಬಂತು. ಈಗ ಸಂಚಾರ ಸುಗಮವಾಗಿ ನಡೆಯುತ್ತದೆ ಎಂದು ನಂಬುತ್ತೇವೆ. ಆದರೆ, ಗುಣಮಟ್ಟವನ್ನು ಕಾಪಾಡಿ ಶಾಶ್ವತ ಪರಿಹಾರ ನೀಡಿ” ಎಂದು ಅವರು ಒತ್ತಾಯಿಸಿದರು.
ಇದೇ ರೀತಿ, ಸ್ಥಳೀಯ ಸಂಘಟನೆ “ಪ್ರತಿಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಪ್ರಯತ್ನಗಳೊಂದಿಗೆ ಮಾಧ್ಯಮದ ಧ್ವನಿಯೇ ಈ ಬದಲಾವಣೆಗೆ ಕಾರಣ. ಇಂತಹ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಆಡಳಿತವು ಮುಂದುವರಿಸಬೇಕು” ಎಂದು ಹೇಳಿದರು.
ಭವಿಷ್ಯದ ಆಶೆ: ಸಂಪೂರ್ಣ ಅಭಿವೃದ್ಧಿಗೆ ಒತ್ತಾಯ ಈ ದುರಸ್ತಿ ಕಾರ್ಯವು ಪಟ್ಟಣದ ಸಂಚಾರವನ್ನು ಸುಗಮಗೊಳಿಸುವ ಹೆಜ್ಜೆಯಾಗಿದ್ದು, ನಾಗರಿಕರು ಇದನ್ನು ಸ್ವಾಗತಿಸುತ್ತಿದ್ದಾರೆ. ಆದರೂ, ಇತರ ಸಮಸ್ಯೆಗಳಾದ ಸಾರ್ವಜನಿಕ ಗ್ರಂಥಾಲಯ ಉದ್ಘಾಟನೆ, ಸಂಚಾರ ನಿಯಂತ್ರಣ ಮತ್ತು ಮಾರುಕಟ್ಟೆಯ ಅರಾಜಕತೆಗೂ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಆಳಂದ್‍ನಂತಹ ತಾಲೂಕು ಕೇಂದ್ರ ಬಿಂದು ಪಟ್ಟಣಗಳಲ್ಲಿ ಮೂಲಭೂತ ಸೌಕರ್ಯಗಳ ಸುಧಾರಣೆಯು ಜನರ ಜೀವನಕ್ಕೆ ಕೊಂಚ ಬದಲಾವಣೆ ತರುತ್ತದೆ. ಮಾಧ್ಯಮದ ಪಾತ್ರವು ಇದರಲ್ಲಿ ಅತ್ಯಂತ ಮುಖ್ಯವಾಗಿದ್ದು, ಈ ಕಾರ್ಯಾರಂಭವು ಇನ್ನಷ್ಟು ಸಕಾರಾತ್ಮಕ ಬದಲಾವಣೆಗಳಿಗೆ ದಾರಿ ಮಾಡಿಕೊಡುವಂತಿದೆ ಎಂದು ಸಾರ್ವಜನಿಕ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.