ಬಾಗಲಕೋಟೆ,ಆ5: ಜಿಲ್ಲೆಯ ಕಬ್ಬು ಬೆಳೆಗಾರರ ಹಾಗೂ ರೈತ ಮುಖಂಡರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇಕೆಗಳಿಗೆ ಸ್ಪಂದಿಸುವಂತೆ ಜಿಲ್ಲೆಯ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲೆಯ ಸಕ್ಕರೆ ಕಾರ್ಖಾನೆ ಮಾಲೀಕರ, ವ್ಯವಸ್ಥಾಪಕ ನಿರ್ದೇಶಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸಕ್ತ ಹಂಗಾಮಿಗೆ ರೈತರು ಬೇಡಿಕೆಗಳನ್ನು ಇಟ್ಟಿದ್ದು, ರೈತರು ನೀಡಿದ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವುದು ಕಾರ್ಖಾನೆಗಳ ಮಾಲಿಕರ ಜವಾಬ್ದಾರಿಯಾಗಿದೆ. ಕಾರ್ಖಾನೆಗಳು ತಾವು ಬೆಳೆಯುವದಲ್ಲದೇ ರೈತರು ಆರ್ಥಿಕವಾಗಿ ಬೆಳೆಸುವ ಕಾರ್ಯವಾಗಬೇಕು. ಕಬ್ಬು ಕಟಾವು ಸಾಗಾಣಿಕೆ ವೆಚ್ಚದಲ್ಲಿ ಒಂದು ಕಾರ್ಖಾನೆಯಿಂದ ಮತ್ತೊಂದು ಕಾರ್ಖಾನೆಗಳಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಇದನ್ನು ಸರಿಪಡಿಸಲು ತಿಳಿಸಿದರು.
ಪ್ರತಿ ಸಕ್ಕರೆ ಕಾರ್ಖಾನೆಗಳು ಗ್ರಾಮವಾರು ಮ್ಯಾಪಿಂಗ್ ಮಾಡಿಕೊಂಡಾಗ ಮಾತ್ರ ಸಾಗಾಣಿಕೆ ವೆಚ್ಚದಲ್ಲಿ ವ್ಯತ್ಯಾಸ ಕಂಡುಬರುವದಿಲ್ಲ. ಇದಕ್ಕಾಗಿ ತಮ್ಮದೇಯಾದ ಒಂದು ಪೋರ್ಟಲ್ ಮಾಡಿಕೊಳ್ಳುವಂತೆ ಕಾರ್ಖಾನೆಗಳಿಗೆ ಸಲಹೆ ನೀಡಿದರು. ಕಬ್ಬು ತುಂಬಿದ ವಾಹನ ಸಕ್ಕರೆ ಕಾರ್ಖಾನೆಯನ್ನು ತಲುಪಿದ ತಕ್ಷಣ ತೂಕ ಮಾಡಿ, ಶುಗರ್ ಕೇನ್ ಶ್ಯಾಂಪ್ಲರ್ ಮಷೀನ್ ಮುಖಾಂತರ ಸಕ್ಕರೆ ಇಳುವರಿ ಕಂಡುಹಿಡಿದು ನಂತರ ಕೇನ್ ಯಾರ್ಡಿಗೆ ಕಳುಹಿಸಿ ತೂಕ ಮತ್ತು ಇಳುವರಿ ಒಂದೇ ಸ್ಲೀಪ್‍ನಲ್ಲಿ ಬರುವಂತೆ ಮಾಡಲು ಕ್ರಮವಹಿಸಲು ಸೂಚಿಸಿದರು.
ಹಿಂದಿನ ಹಂಗಾಮಿನ ಸಕ್ಕರೆ ಇಳುವರಿಯ ಆಧಾರದ ಮೇಲೆ ಪ್ರಸಕ್ತ ಹಂಗಾಮಿಗೆ ಕಬ್ಬಿನ ಬೆಲೆ ನಿಗಧಿ ಮಾಡುವುದು ಅವೈಜ್ಞಾನಿಕವಾಗಿದೆ. ಆಯಾ ಹಂಗಾಮಿನ ಇಳುವರಿಯನ್ನು ಪರಿಗಣಿಸುವಂತೆ ರೈತರ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಕಾರ್ಖಾನೆಗಳು ಪ್ರತಿ ಹಂಗಾಮಿನಲ್ಲಿ ಕಬ್ಬಿನ ಇಳುವರಿಯನ್ನು ಪರಿಶೀಲೀಸಿ ನಿಗದಿಪಡಿಸಲು ತಿಳಿಸಿದರು. ಮಷೀನ್ ಮೂಲಕ ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಪ್ರತಿಶತ 6 ರಿಂದ 8 ರಷ್ಟಯ ಕಬ್ಬಿನ ತೂಕ ಕಡಿಮೆ ಮಾಡುತ್ತಿರುವುದು ಕಂಡುಬಂದಿದ್ದು, ಇದು ಕಡಿತವಾಗಬಾರದು ಎಂದರು.
ಕಳೆದ ಹಂಗಾಮಿನಲ್ಲಿ ಜಮಖಂಡಿ ತಾಲೂಕಿನ ಹಿರೇಪಡಸಲಗಿಯಲ್ಲಿರುವ ಜಮಖಂಡಿ ಶುಗರ್ಸ್‍ನವರನ್ನು ಹೊರತುಪಡಿಸಿ ಉಳಿದೆಲ್ಲ ಸಕ್ಕರೆ ಕಾರ್ಖಾನೆಗಳು ಸಂಪೂರ್ಣವಾಗಿ ಕಬ್ಬು ಪೂರೈಸಿದ ಮೊತ್ತವನ್ನು ಪಾವತಿಸಿದ್ದಾರೆ. ಜಮಖಂಡು ಶುಗರ್ಸ್‍ನವರು 18.42 ಕೋಟಿ ರೂ.ಗಳಷ್ಟು ಬಾಕಿ ಉಳಿಸಿಕೊಂಡಿದ್ದು, ಈ ಬಾಕಿ ಮೊತ್ತವನ್ನು ಕಾಲಮಿತಿ ಇಲ್ಲದೇ ರೈತರಿಗೆ ಪಾವತಿಸಬೇಕು. ಇಲ್ಲವಾದಲ್ಲಿ ಕಾರ್ಖಾನೆಯಲ್ಲಿರುವ ಸಕ್ಕರೆಯನ್ನು ಜಪ್ತ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ ಕಳೆದ ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಭಟನೆಗಳು ಆಗಿದ್ದು, ಈ ಹಂಗಾಮಿನಲ್ಲಿ ಯಾವುದೇ ರೀತಿಯಲ್ಲಿ ಘಟನೆಗಳು ನಡೆಯಲು ಅವಕಾಶ ಕೊಡಬಾರದು. ರೈತರ ವಿಶ್ವಾಸಕ್ಕೆ ತೆಗೆದುಕೊಂಡು ಅವರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂಧಿಸು ಕೆಲಸವಾಗಬೇಕು. ಉತ್ತಮವಾದ ಕಬ್ಬು ಬೆಳೆಯಲು ಕಾರ್ಖಾನೆಗಳ ಮೂಲಕ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಲ್.ಹೊಸಮನಿ, ಜಿಲ್ಲಾ ಪರಸರ ಅಧಿಕಾರಿ ಡಾ.ಅನೀಲಕುಮಾರ ಚಳಗೇರಿ, ಸಹಕಾರ ಇಲಾಖೆಯ ಉಪನಿಬಂಧಕ ದಯಾನಂದ ಹಿರೇಮಠ, ಜಿಲ್ಲಾ ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ ಸೇರಿದಂತೆ ಇತರರು ಉಪಸ್ಥಿತರಿದ್ದರು.























