
ಮಧುಗಿರಿ, ಡಿ. ೧೨- ತಗ್ಗಿಹಳ್ಳಿ ಶ್ರೀ ರಾಮಕೃಷ್ಣ ಆಶ್ರಮದ ಸಹಯೋಗದೊಂದಿಗೆ ತುಮಕೂರನ್ನು ಡ್ರಗ್ಸ್ ಮುಕ್ತ ಜಿಲ್ಲೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಹೇಳಿದರು.
ತಾಲ್ಲೂಕಿನ ಪುರವರ ಹೋಬಳಿಯ ತಗ್ಗಿಹಳ್ಳಿ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಶ್ರಮದಲ್ಲಿ ಪ್ರತಿವಾರ ವಿದ್ಯಾರ್ಥಿಗಳಿಗೆ ಶಿಬಿರಗಳನ್ನು ಮತ್ತು ಮಧುಗಿರಿ, ಕೊರಟಗೆರೆ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ತಡೆ ಮತ್ತು ನಶೆ ಮುಕ್ತ ಅಭಿಯಾನ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ತಡೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುವುದು. ರಾಮಕೃಷ್ಣ ಆಶ್ರಮದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಅದರಲ್ಲಿ ಭೋಜನಾಲಯ ಸಾಧನೆ ವಾಸ, ವಿಶ್ರಾಂತಿ ಕೊಡಲಿ ಮುಂತಾದ ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಂದಿನ ದಿನಗಳಲ್ಲಿ ಆಶ್ರಮದ ವತಿಯಿಂದ ಹೋಮಿಯೋಪತಿ ಆಸ್ಪತ್ರೆ ತೆರೆಯುವ ಉದ್ದೇಶ ಇದೆ ಎಂದರು.
ತಗ್ಗಿಹಳ್ಳಿ ರಾಮಕೃಷ್ಣ ಆಶ್ರಮದ ಶ್ರೀ ರಮಾನಂದ ಚೈತನ್ಯ ಸ್ವಾಮೀಜಿ ಮಾತನಾಡಿ, ಕಳೆದ ೩೩ ವರ್ಷಗಳಿಂದ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದು, ೧೯೯೧ರಲ್ಲಿ ೨.೫೦ ಲಕ್ಷ ರೂ.ಗಳ ಠೇವಣಿ ಹಣವಿದ್ದು ಪ್ರಸ್ತುತ ೪೫ ಲಕ್ಷ ರೂ. ಶಾಶ್ವತ ನಿಧಿ ಠೇವಣಿ ಮಾಡಲಾಗಿದೆ. ೪೫ ಲಕ್ಷ ರೂ.ಗಳ ವೆಚ್ಚದಲ್ಲಿ ಮಕ್ಕಳಿಗೆ ಅಗತ್ಯವಾದ ಸಲಕರಣೆಗಳನ್ನು ನೀಡಲಾಗಿದೆ. ಮಠದ ಉದ್ದೇಶ ಸಮಾಜಕ್ಕೆ ಸೌಲಭ್ಯಗಳನ್ನು ಕಲ್ಪಿಸುವುದೇ ಆಗಿದೆ ಎಂದರು.
ಡಿ. ೧೨ರಿಂದ ೧೫ರವರೆಗೂ ಆಶ್ರಮದಲ್ಲಿ ಸದ್ಗುರು ಬ್ರಹ್ಮ ಚೈತನ್ಯ ಮಹಾರಾಜರ ೫೧ನೇ ಆರಾಧನಾ ಮಹೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ. ಡಿ. ೧೨ರಂದು ಮಹಾಗಣಪತಿ ಹೋಮ ನಡೆಸಲಾಗುತ್ತಿದ್ದು, ಅಂದು ಹಲಸೂರು ರಾಮಕೃಷ್ಣ ಮಠದ ಬೋಧ ಸ್ವರೂಪಾನಂದ ಮಹಾರಾಜ್ ದಿವ್ಯ ಸಾನಿದ್ಯ ವಹಿಸಲಿದ್ದು, ಡಿ. ೧೩ರಂದು ಸುದರ್ಶನ ಹೋಮ ನಡೆಯಲಿದೆ. ಅಂದು ರಾಮೋ ಹಳ್ಳಿ ಮಠದ ಯೋಗೀಶ್ವರಾನಂದ ಮಹಾರಾಜ್ ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದರು.
ಡಿ. ೧೪ರಂದು ರಾಮ ತಾರಕ ಹೋಮ ಕಾರ್ಯಕ್ರಮಕ್ಕೆ ತುಮಕೂರು ರಾಮಕೃಷ್ಣ ಆಶ್ರಮದ ವೀರೇಶಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಡಿ. ೧೫ ರಂದು ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಸಲಾಗುವುದು. ಆಶ್ರಮದ ವತಿಯಿಂದ ಮುಂದಿನ ದಿನಗಳಲ್ಲಿ ಅನಾಥ ಮಕ್ಕಳಿಗೆ ಆರನೇ ತರಗತಿಯಿಂದ ಪಿಯುಸಿವರೆಗೂ ಉಚಿತ ಶಿಕ್ಷಣ ನೀಡುವ ಉದ್ದೇಶ ಇದೆ. ಅದೇ ರೀತಿ ಟೈಲರಿಂಗ್ ತರಬೇತಿ, ಕಂಪ್ಯೂಟರ್ ತರಬೇತಿ ನೀಡಲಾಗುವುದು ಮತ್ತು ಗ್ರಂಥಾಲಯ ಸ್ಥಾಪಿಸುವ ಉದ್ದೇಶ ಇದೆ ಎಂದರು.
ಎಪಿಎಂಸಿ ಮಾಜಿ ಉಪಾಧ್ಯಕ್ಷ ಕೊಂಡವಾಡಿ ರಾಜಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಪ್ರತಿವಾರ ತಗ್ಗಿಹಳ್ಳಿಯ ರಾಮಕೃಷ್ಣ ಆಶ್ರಮಕ್ಕೆ ವರ ಸಂಚಾರ ಬರುವುದರಿಂದ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಭಾವನೆ ಮೂಡಲು ಮತ್ತು ಮತ್ತು ಪರಿವರ್ತನೆ ಮೂಡಿಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡ ಎಂ.ಜಿ. ಶ್ರೀನಿವಾಸ್‌ಮೂರ್ತಿ, ಹುಬ್ಬಳ್ಳಿಯ ರಾಮಕೃಷ್ಣ ಬುದ್ಧಿ ಯೋಗಾನಂದ ಜಿ., ಗ್ರಾಮ ಪಂಚಾಯ್ತಿ ಅಧ್ಯಕ್ಷ ದಿಲೀಪ್, ಮಾಜಿ ಅಧ್ಯಕ್ಷ ಸಂಕಾಪುರ ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.



























