Home ಜಿಲ್ಲೆ ಹಿರಿಯ ನಾಗರಿಕರಿಗೆ ರೈಲ್ವೆ ರಿಯಾಯಿತಿ ಮರುಮಂಜೂರು ಮಾಡುವಂತೆ ಮನವಿ

ಹಿರಿಯ ನಾಗರಿಕರಿಗೆ ರೈಲ್ವೆ ರಿಯಾಯಿತಿ ಮರುಮಂಜೂರು ಮಾಡುವಂತೆ ಮನವಿ

ಬೀದರ್:ಏ.4:ಹಿರಿಯ ನಾಗರಿಕರಿಗೆ ರೈಲ್ವೆ ಪ್ರಯಾಣದಲ್ಲಿ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಮರುಮಂಜೂರು ಮಾಡಬೇಕೆಂದು ಜೈಹಿಂದ್ ಹಿರಿಯ ನಾಗರಿಕರ ಸಂಘದ ವತಿಯಿಂದ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.

ರಾಜ್ಯ ಹಿರಿಯ ನಾಗರಿಕರ ಪ್ರಶಸ್ತಿ ಪುರಸ್ಕøತರಾದ ವೀರಭದ್ರಪ್ಪ ಉಪ್ಪಿನ ಅವರು ಬೀದರ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ಕೋವಿಡ್-19 ಸಂದರ್ಭದಲ್ಲಿನ ಆರ್ಥಿಕ ಸಂಕಷ್ಟವನ್ನು ಉಲ್ಲೇಖಿಸಿ 2020 ಮಾರ್ಚ್ 20ರಿಂದ ಹಿರಿಯ ನಾಗರಿಕರ ರಿಯಾಯಿತಿಯನ್ನು ರದ್ದುಪಡಿಸಲಾಗಿತ್ತು. ಆದರೆ ನಂತರ ದೇಶದ ಆರ್ಥಿಕ ಸ್ಥಿತಿ ಸುಧಾರಿಸಿದ್ದು, ರೈಲ್ವೆ ಸೇವೆಗಳು ವಿಸ್ತಾರಗೊಂಡಿವೆ ಎಂದು ಅವರು ತಿಳಿಸಿದ್ದಾರೆ.

ವಂದೇ ಭಾರತ ಸೇರಿದಂತೆ ಸೂಪರ್ ಫಾಸ್ಟ್ ರೈಲುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ರೈಲ್ವೆ ಇಲಾಖೆ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಹಿರಿಯ ನಾಗರಿಕರಿಗೆ ರಿಯಾಯಿತಿಯನ್ನು ಮರುಪ್ರಾರಂಭಿಸದಿರುವುದು ವಿಷಾದನೀಯ ಎಂದು ಹೇಳಿದರು.

ಈ ಕುರಿತು ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಹಿರಿಯ ನಾಗರಿಕರ ಸಂಘಗಳು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಅವರು ಆಕ್ಷೇಪಿಸಿದರು.

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ರೈಲ್ವೆ ಪ್ರಯಾಣದಲ್ಲಿ ರಿಯಾಯಿತಿ ನೀಡಿದರೆ ಅವರ ಜೀವನ ನಿರ್ವಹಣೆಗೆ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು. ರೈಲ್ವೆ ಇಲಾಖೆ ಲಾಭದಲ್ಲಿರುವ ಹಿನ್ನೆಲೆಯಲ್ಲಿ ಈ ರಿಯಾಯಿತಿಯಿಂದ ಹೆಚ್ಚಿನ ಆರ್ಥಿಕ ಹೊರೆ ಉಂಟಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಹಿರಿಯ ನಾಗರಿಕರಿಗೆ ಕಾನೂನು ಚೌಕಟ್ಟಿನಲ್ಲಿ ರೈಲ್ವೆ ರಿಯಾಯಿತಿಯನ್ನು ಮರುಮಂಜೂರು ಮಾಡುವಂತೆ ಅವರು ಆಗ್ರಹಿಸಿದರು. ಈ ಸಂಬಂಧ ಮನವಿ ಪತ್ರವನ್ನು ಬೀದರ್ ಜಿಲ್ಲಾಧಿಕಾರಿಗಳ ಮೂಲಕ ರೈಲ್ವೆ ಸಚಿವರಿಗೆ ರವಾನಿಸಲಾಗಿದೆ.

ಈ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಮಲ್ಲಿಕಾರ್ಜುನ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.