ವರದಿಗಾರಿಕೆ ಅಧಿಕಾರ ಅಲ್ಲ, ಇದೊಂದು ಮಹತ್ವದ ಜವಾಬ್ದಾರಿ: ಈಶ್ವರ ಖಂಡ್ರೆ

ಬೀದರ್: ಡಿ.7: ವರದಿಗಾರಿಕೆ ಅಧಿಕಾರ ಅಲ್ಲ. ಇದೊಂದು ಮಹತ್ವದ ಜವಾಬ್ದಾರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಅಭಿನಂದನಾ ಸಮಾರಂಭ ಹಾಗೂ ಭೀಮಣ್ಣ ಖಂಡ್ರೆ ಅವರ ಹೆಸರಿನಲ್ಲಿ ಸಚಿವ ಈಶ್ವರ ಖಂಡ್ರೆ ಅವರು ಸ್ಥಾಪಿಸಿತ್ತಿರುವ ದತ್ತಿ ನಿಧಿಯ ಚೆಕ್ ಹಸ್ತಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದಿಗಿಂತಲೂ ಪ್ರಸ್ತುತ ಮಾಧ್ಯಮ ಕ್ಷೇತ್ರದ ಜವಾಬ್ದಾರಿ ಹೆಚ್ಚಿದೆ. ಸೌಹಾರ್ದತೆ ಭಾರತ ಕಟ್ಟಬೇಕಾದರೆ ನೈಜ ವರದಿಗಳಿಗೆ ಆದ್ಯತೆ ನೀಡಬೇಕಾಗಿದೆ ಎಂದರು.
ಮಾಧ್ಯಮಗಳು ತಮ್ಮ ವರದಿಯಲ್ಲಿ ನೈಜತೆ ಮತ್ತು ಪಾರದರ್ಶಕತೆ ಕಾಪಾಡಿಕೊಂಡಾಗ ಮಾಧ್ಯಮರಂಗಕ್ಕೆ ಗೌರವ ಹೆಚ್ಚಲು ಸಾಧ್ಯವಾಗುತ್ತದೆ. ತಮ್ಮ ಸ್ಥಾನಮಾನಕ್ಕೆ ಧಕ್ಕೆ ಬರದಂತೆ ಪತ್ರಕರ್ತರು ಕಾರ್ಯ ನಿರ್ವಹಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಮಾಧ್ಯಮ ಸಮಾಜದಲ್ಲಿ ಪರಿವರ್ತನೆ ತರುವಲ್ಲಿ ಅಪಾರ ಕೊಡುಗೆ ಇದೆ. ಮಹಾತ್ಮ ಗಾಂಧಿ ಡಾ.ಅಂಬೇಡ್ಕರ್ ಸೇರಿದಂತೆ ಹಲವರು ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಸುಧಾರಣೆ ಮಾಡುವ ಕೆಲಸ ಮಾಧ್ಯಮ ಮಾಡುತ್ತಿದೆ. ಪತ್ರಕರ್ತರಿಗೆ ಸೂಕ್ತ ಭದ್ರತೆ, ರಕ್ಷಣೆ ಕೊಡುವ ಕೆಲಸ ಮಾಡಬೇಕಾಗಿದೆ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಅನ್ಯಾಯದ ವಿರುದ್ಧ ಪತ್ರಕರ್ತರಾಗಿ ಡಾ.ಅಂಬೇಡ್ಕರ್ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರು. ಇಂದು ಅವರ ಪರಿನಿಬ್ಬಾಣ ದಿನದಂದೇ ಅಭಿನಂದನಾ ಸಮಾರಂಭ ಹಾಗೂ ದತ್ತಿ ನಿಧಿ ಚೆಕ್ ಹಸ್ತಾಂತರ ಕಾರ್ಯಕ್ರಮ ಆಯೋಜಿಸಿದ್ದು ಉತ್ತಮ.
ಸಂಘದ ನೂತನ ಅಧ್ಯಕ್ಷ ಶಿವಾನಂದ ತಗಡೂರು ಸರಳ, ಸಜ್ಜನಿಕೆ ವ್ಯಕ್ತಿ. ಕೋವಿಡ್ ವೇಳೆ ಜೀವದ ಹಂಗು ತೊರೆದು ಪತ್ರಕರ್ತರ ಕೆಲಸ ಮಾಡಿದ್ದಾರೆ. ಕರೊನಾ ವೇಳೆ ಮಡಿದ ಪತ್ರಕರ್ತರ ಪರಿಹಾರ ಕೊಡಿಸುವಲ್ಲಿ ತಗಡೂರು ಸಾಕಷ್ಟು ಪ್ರಯತ್ನಿಸಿದ್ದರು. ಯಾವುದೇ ಚುನಾವಣೆ ಇಲ್ಲದೆ ಸಂಘದ ಬೀದರ್ ಜಿಲ್ಲಾ ಘಟಕಕ್ಕೆ ಆನಂದ ದೇವಪ್ಪ ಅವರನ್ನು ನೇಮಕ ಮಾಡಿದ್ದು ಸಂತಸ ತಂದಿದೆ ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ,
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ್ ಜಿಲ್ಲಾ ಘಟಕ ರಚನೆ ಸಂಬಂಧ ಅಡಾಕ್ ಸಮಿತಿ ರಚಿಸಿಸಿದ್ದು, ಈ ಸಮಿತಿಗೆ ಆನಂದ ದೇವಪ್ಪ ಅವರನ್ನು ಮುಖ್ಯಸ್ಥರನ್ನಾಗಿ ಹಾಗೂ ಸದಸ್ಯರಾಗಿ ಅಪ್ಪಾರಾವ ಸೌದಿ, ಶಿವಕುಮಾರ ಸ್ವಾಮಿ ಅವರನ್ನು ನೇಮಿಸಲಾಗಿದೆ ಎಂದು ಹೇಳಿದರು.
ಬೀದರ್ ಜಿಲ್ಲೆಯ ಸಂಘದ ಸರ್ವ ಸದಸ್ಯರು ಒಗ್ಗಟ್ಟಿನಿಂದ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ನೇಮಕ ಮಾಡಲಾಗಿದೆ ಎಂದರು.
ಮೂರು ದಶಕಗಳ ಬಸ್ ಪಾಸ್ ಹೋರಾಟವನ್ನು ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದೆ. ಎಲ್ಲ ಪತ್ರಕರ್ತರು ಉಚಿತವಾಗಿ ಪ್ರಯಾಣ ಮಾಡಬಹುದು. ಪತ್ರಕರ್ತರಿಗೆ ಆರೋಗ್ಯ ಭಾಗ್ಯ ನೀಡುವ ನಿಟ್ಟಿನಲ್ಲಿ ಸಿಎಂ ಮಾಧ್ಯಮ ಸಂಜೀವಿನಿ ಯೋಜನೆ ಜಾರಿಗೆ ತಂದಿದೆ. ಮಾಧ್ಯಮಪಟ್ಟಿಯಲ್ಲಿ ಇರುವವರೆಗೆ ನಗದು ರಹಿತ ಚಿಕಿತ್ಸೆ ಸೌಲಭ್ಯ ಸಿಗಲಿದೆ. ಎಲ್ಲ ಪತ್ರಕರ್ತರಿಗೆ ಈ ಯೋಜನೆಯಡಿ ತರುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಲಾಗಿದೆ ಎಂದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ. ಲೇಕೇಶ್, ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಡಾಕ ಕಮಿಟಿ ಮುಖ್ಯಸ್ಥ ಆನಂದ ದೇವಪ್ಪ, ಮಹಾನಗರ ಪಾಲಿಕೆ ಅಧ್ಯಕ್ಷ ಮಹ್ಮದ್ ಗೌಸೊದ್ದೀನ್, ಪ್ರಮುಖರಾದ ದೀಪಕ್ ವಾಲಿ, ಅಲಿಬಾಬಾ, ಸಿದ್ರಾಮಯ್ಯ ಸ್ವಾಮಿ, ಬಸವರಾಜ ಕಾಮಶೆಟ್ಟಿ, ಅಪ್ಪಾರಾವ ಸೌದಿ, ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಮಲ್ಲಿಕಾರ್ಜುನ ಮರಖಲೆ ಇತರರಿದ್ದರು.
ಹಿರಿಯ ಪತ್ರಕರ್ತ ಬಾಬು ವಾಲಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಬಿರಾದಾರ್ ಸ್ವಾಗತಿಸಿದರು. ಮಾಳಪ್ಪ ಅಡಸಾರೆ, ಶಿವಕುಮಾರ ಸ್ವಾಮಿ ನಿರೂಪಣೆ ಮಾಡಿದರು.