
ಬೀದರ್: ಮೇ.22:ತಾಲೂಕಿನ ಚಿಟ್ಟಾ ಗ್ರಾಮದಿಂದ ಘೋಡಂಪಳ್ಳಿ ಗ್ರಾಮದ ವರೆಗೆ ಸಂಪರ್ಕಿಸುವ ಸುಮಾರು 2 ಕಿಲೋ ಮೀಟರ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ತಕ್ಷಣವೇ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕೆಂದು ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿ (ರಿ) ಆಗ್ರಹಿಸಿದೆ.
ಗುರುವಾರ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಮಿತಿಯ ರಾಜ್ಯಾಧ್ಯಕ್ಷ ರವೀಂದ್ರ ರೆಡ್ಡಿ ಆರ್., ವಿಭಾಗೀಯ ಅಧ್ಯಕ್ಷ ಸಂಗಮೇಶ ಭಾವಿದೊಡ್ಡಿ ಹಾಗೂ ಜಿಲ್ಲಾ ಅಧ್ಯಕ್ಷ ವಿಶಾಲ ದೊಡ್ಡಿ ಅವರ ನೇತೃತ್ವದ ತಂಡ, ಚಿಟ್ಟಾ, ಚಿಟ್ಟಾವಾಡಿ ಮತ್ತು ಘೋಡಂಪಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ಮುಖ್ಯ ರಸ್ತೆ ಕಳೆದ ಹಲವು ದಿನಗಳಿಂದ ಹದಗೆಟ್ಟಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ವಿಶೇಷವಾಗಿ ವೃದ್ಧರು, ಬೈಕ್ ಸವಾರರು, ಟ್ರಾಕ್ಟರ್ ಮತ್ತು ಟೆಂಪೆÇೀ ವಾಹನ ಚಾಲಕರು ಸಂಚಾರಕ್ಕೆ ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತರು ಬೀಜ, ಗೊಬ್ಬರ ಸೇರಿದಂತೆ ಕೃಷಿ ಸಾಮಗ್ರಿಗಳನ್ನು ಗ್ರಾಮಗಳಿಗೆ ತರಲು ಸಾಧ್ಯವಾಗುತ್ತಿಲ್ಲ. ರಸ್ತೆ ದುಸ್ಥಿತಿಯಿಂದ ವಾಹನ ಮಾಲೀಕರು ಗ್ರಾಮಗಳಿಗೆ ಬರಲು ನಿರಾಕರಿಸುತ್ತಿರುವುದರಿಂದ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಹೆಚ್ಚಿನ ತೊಂದರೆ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆದ್ದರಿಂದ ಜಿಲ್ಲಾಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ತುರ್ತಾಗಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಬೇಡಿಕೆ ಈಡೇರದಿದ್ದಲ್ಲಿ ಹಂತ ಹಂತವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸುವುದಾಗಿ ಸಮಿತಿ ಎಚ್ಚರಿಕೆ ಸಹ ನೀಡಿದೆ.


























