ಸಿರಾ, ಸೆ. ೧೭- ನಗರದ ಹಿತದೃಷ್ಟಿಯಿಂದ ಸುಸಜ್ಜಿತವಾದ ಮತ್ತು ಆಕರ್ಷಣೀಯ ಬಸ್ ನಿಲ್ದಾಣವನ್ನು ೧ ಕೋಟಿ ೨೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಹಾಗೂ ವಾರ್ಡ್ ನಂ:೨೫ ರಲ್ಲಿ ನೂತನವಾಗಿ ನವೀಕರಣಗೊಂಡ ಸಿರಾ ನಗರದ ಖಾಸಗಿ ಬಸ್ ನಿಲ್ದಾಣದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನಗರದ ಪ್ರತಿಯೊಂದು ವಾರ್ಡುಗಳಲ್ಲಿ ಸಿ ಸಿ ರಸ್ತೆ ಹಾಗೂ ಡಾಂಬರ್ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ನಗರದ ಅಭಿವೃದ್ದಿ ಕಣ್ಣಿಗೆ ಕಾಣಿಸುವಂತಾಗಿದೆ. ಆದರೆ ಇಲ್ಲಿನ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಶಿಸ್ತನ್ನು ಕಾಪಾಡಿಕೊಳ್ಳಬೇಕು. ಇದರಿಂದ ನಗರದ ಅಂದ ಇನ್ನಷ್ಟು ವೃದ್ದಿಸುತ್ತದೆ. ನಗರದ ದೊಡ್ಡಕೆರೆಗೆ ಹೇಮಾವತಿ ಹರಿದು ಬಂದಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿದಿದ್ದು, ಹೊಸ ಹೊಸ ಕೈಗಾರಿಕೆಗಳ ಸ್ಥಾಪನೆಯಿಂದಾಗಿ ಗಡಿಭಾಗದ ತಾಲ್ಲೂಕಾಗಿರುವ ಈ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎಂದರು.
ನಂತರ ನಗರಸಭೆಗೆ ಮಂಜೂರಾದ ನೂತನ ಕಸ ವಿಲೇವಾರಿ ವಾಹನಗಳಿಗೆ ಹಸಿರು ನಿಶಾನೆ ತೋರಿದರು.
ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷ ಜೀಶಾನ್ ಮೆಹಮೂದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್, ಪೌರಾಯುಕ್ತ ರುದ್ರೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜ್, ನಗರಸಭಾ ಸದಸ್ಯರಾದ ಎಸ್.ಎಲ್ ರಂಗನಾಥ್, ಆರ್ ರಾಮು, ಉಮಾ ವಿಜಯ್ ರಾಜ್, ತೇಜ ಭಾನುಪ್ರಕಾಶ್, ಖಾದರ್, ಮಜರ್, ಧ್ರುವ, ಮಹೇಶ್, ಸುಶೀಲಾ ವಿರೂಪಾಕ್ಷ, ಆಶ್ರಯ ಸಮಿತಿ ಸದಸ್ಯರಾದ ಜಯಲಕ್ಷ್ಮಿ, ಮಂಜುನಾಥ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಹದೇವಮ್ಮ, ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಣಿಕಂಠ, ಅಂಜನ್‌ಕುಮಾರ್, ಹೇಮಂತ್‌ಗೌಡ ಮತ್ತಿತರರು ಉಪಸ್ಥಿತರಿದ್ದರು.


























