ಮಕ್ಕಳಿಂದ ಮೊಬೈಲ್ ಬಿಡಿಸಿ, ಪಠ್ಯೇತರ ಆಸಕ್ತಿ ಹೆಚ್ಚಿಸಿ: ವೆಂಕಟಪ್ಪ

ತುಮಕೂರು, ಡಿ. ೧೯- ಮಕ್ಕಳು ಅತಿಯಾಗಿ ಮೊಬೈಲ್ ಬಳಕೆ ಮಾಡುವುದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯುಂಟಾಗುತ್ತಿದ್ದು, ಶಾಲೆಯ ಶಿಕ್ಷಣದ ಜತೆಗೆ ಮಕ್ಕಳಿಗೆ ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಿಸಬೇಕು ಎಂದು ತುರುವೇಕೆರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ತಾಲ್ಲೂಕು ಬಾಲಭವನ ಸಮಿತಿ ಕಾರ್ಯದರ್ಶಿ ವೆಂಕಟಪ್ಪ ಹೇಳಿದರು.


ತುರುವೇಕೆರೆ ತಾಲ್ಲೂಕು ಬಾಲಭವನ ವತಿಯಿಂದ ಶ್ರೀ ಆದಿಚುಂಚನಗಿರಿ ಮಯೂರ ವಿದ್ಯಾಲಯ ಮತ್ತು ಸರಸ್ವತಿ ಬಾಲಿಕ ಪ್ರೌಢಶಾಲೆಯಲ್ಲಿ ೫ ರಿಂದ ೧೬ ವರ್ಷದ ಮಕ್ಕಳಿಗಾಗಿ ಏರ್ಪಡಿಸಿದ್ದ ಆಟೋಟ ಸ್ಪರ್ಧೆಯಲ್ಲಿ ಓಡುವ ಸ್ಪರ್ಧೆ ಮತ್ತು ಆಶು ಭಾಷಣ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.


ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಜಿಲ್ಲಾ ಬಾಲಭವನದ ವತಿಯಿಂದ ಇಂತಹ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅನೇಕ ರೀತಿಯ ಪಠ್ಯೇತರ ಚಟುವಟಿಕೆಗಳು, ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದರು.


ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸಿ ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು, ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ವಿಜೇತರಾಗಲು ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುರುವೇಕೆರೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಯ್ಯ ಎನ್. ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು.

ಬಾಲ್ಯಾವ್ಯಸ್ಥೆಯಲ್ಲಿ ಪ್ರತಿಭೆಗಳನ್ನು ಹೊರಹೊಮ್ಮಿಸುವ ಸಲುವಾಗಿ ಇಂತಹ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಮುಖ್ಯ, ಬಹುಮಾನ ಗೆಲ್ಲುವುದು ನಂತರ. ಆಶುಭಾಷಣ ಸ್ಪರ್ಧೆಯಿಂದ ಮಕ್ಕಳು ಮಾತಿನ ಚಾಕುಚಕ್ಯತೆಯನ್ನು ಕಲಿಯಬಹುದು. ಅವಶ್ಯಕತೆ ಮಾತುಗಳನ್ನು ಹಿತವಾಗಿ ಮಿತವಾಗಿ ಹೇಗೆ ಆಡಬಹುದು ಎಂದು ತಿಳಿದುಕೊಳ್ಳಬಹುದು ಎಂದು ತಿಳಿಸಿದರು.


ತುರುವೇಕೆರೆ ತಾಲ್ಲೂಕು ವೈದ್ಯಾಧಿಕಾರಿ ಡಾ. ರಂಗನಾಥ್ ಬಿ. ಮಾತನಾಡಿ, ಮಕ್ಕಳು ಹೆಚ್ಚಿನ ರೀತಿಯಲ್ಲಿ ಮೊಬೈಲ್ ಬಳಕೆ ಮಾಡುವುದರಿಂದ ಮಗುವಿಗೆ ಪಾಶ್ವವಾಯುಯಾಗಿರುವುದನ್ನು ಉದಾಹರಣೆ ಸಹಿತ ತಿಳಿಸಿದರು. ಮಕ್ಕಳು ಆಟವಾಡಬೇಕು. ಇದರಿಂದ ವ್ಯಾಯಾಮ ಆಗುತ್ತದೆ ಮತ್ತು ಪಾಸ್ಟ್ ಫುಡ್ ತಿನ್ನುವುದರಿಂದ ಆಗುವ ದುಷ್ಟಪರಿಣಾಮಗಳ ಬಗ್ಗೆ ತಿಳಿಸಿದರು.


ಜಿಲ್ಲಾ ಬಾಲಭವನ ಸಮಿತಿಯ ಕಾರ್ಯಕ್ರಮ ಸಂಯೋಜಕಿ ಮಮತ ಪಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು.


ಕಾರ್ಯಕ್ರಮದಲ್ಲಿ ತುರುವೇಕೆರೆ ಸಿ.ಆರ್.ಪಿ. ಸುರೇಶ್, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಮಮತ, ಯಶವಂತ್, ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ಸಿಬ್ಬಂದಿಗಳು ಹಾಗೂ ಮಕ್ಕಳು ಜಿಲ್ಲಾ ಬಾಲಭವನ ಸಮಿತಿ ಕಚೇರಿ ಸಹಾಯಕಿ ಶಿಲ್ಪ ಜಿ.ಎಸ್. ಮತ್ತಿತರರು ಭಾಗವಹಿಸಿದ್ದರು.


ಈ ಸಂದರ್ಭದಲ್ಲಿ ಓಡುವ ಸ್ಪರ್ಧೆ ಮತ್ತು ಆಶುಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ, ಪ್ರಮಾಣ ಪತ್ರ ಹಾಗೂ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು.