ಪುಣ್ಯಸ್ಮರಣೋತ್ಸವ ಕಾರ್ಯಕ್ರಮ

ಬಾದಾಮಿ,ಫೆ9: ಧಾರ್ಮಿಕ ಕ್ಷೇತ್ರಕ್ಕೆ ಶ್ರೀ ಶಿವಯೋಗಮಂದಿರದ ಕೊಡುಗೆ ಅಪಾರವಾಗಿದೆ ಎಂದು ಶಿವಯೋಗಮಂದಿರ ಸಂಸ್ಥೆಯ ಉಪಾಧ್ಯಕ್ಷ ಪರಮ ಪೂಜ್ಯ ಶ್ರೀ ಮ. ನಿ. ಪ್ರ. ಶ್ರೀ ಸದಾಶಿವ ಮಹಾ ಸ್ವಾಮಿಗಳು ಹೇಳಿದರು.


ಅವರು ತಾಲೂಕಿನ ಶಿವಯೋಗಮಂದಿರದಲ್ಲಿ ಹಮ್ಮಿಕೊಂಡಿದ್ದ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳು 96 ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಹಾನಗಲ್ ಶಿವಯೋಗಿಗಳು ಕಟ್ಟಿದ ಧರ್ಮ, ಸಂಸ್ಕೃತಿ, ಸಾಹಿತ್ಯ, ಶಿವಯೋಗ ಸಾಧನೆ, ನಿರಕ್ಷರ ನಿವಾರಣಾದಂಥ ಕಾರ್ಯಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ಇಲ್ಲಿ ಸ್ಪಿರಿಚ್ಯುವಲ್ ತರಬೇತಿ ಹೊಂದಿ ನಾಡಿನ ನೂರಾರು ಮಠಗಳ ಮಠಾಧೀಶರಾಗಿರುವ ಪೂಜ್ಯರು ಮಾಡುತ್ತಿರುವ ಧರ್ಮದಾಸೋಹ, ಅನ್ನದಾಸೋಹ, ಶಿಕ್ಷಣದಾಸೋಹದ ಕಾರ್ಯಗಳು ಅಮೊಘವಾಗಿವೆ.


ವರ್ತಮಾನದ ತಳಹದಿಯ ಮೇಲೆ ಸ್ಥಾಪಿತವಾಗಿರುವ ಶ್ರೀ ಶಿವಯೋಗ ಮಂದಿರವು ಎಲ್ಲ ಕಾಲಕ್ಕೂ ಚಲನಶೀಲವಾದುದು. ಅಂಧರ, ಅನಾಥರ, ಬಾಳಿಗೆ ಪ್ರವಚನ, ಕೀರ್ತನ, ಸಂಗೀತದಂತಹ ಮೌಲ್ಯಗಳನ್ನು ಬಿತ್ತಿ ಬೆಳೆದ ಕೊಡುಗೆ ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ. ಪ್ರಸ್ತುತ ಈ ಆದರ್ಶಗಳ ಸಾರ್ವಕಾಲಿಕ ಪ್ರಸ್ತುತವಾಗಿವೆ ಎಂದು ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ 96 ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.


ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ತತ್ವಗಳು ಸದಾ ಬೆಳಗುವ ಜಾಜ್ವಲ್ಯ ದೀಪಗಳು. ಇವರ ಸಂಕಲ್ಪದೊಂದಿಗೆ ನಾಡಿಗೆ ಶಿಕ್ಷಣ ಕೇಂದ್ರಗಳು ತಲೆ ಎತ್ತುತ್ತಿವೆ. ಈ ಸಂಕಲ್ಪಗಳನ್ನು ನಿತ್ಯ ಸ್ಮರಿಸುವುದೇ ನಾವಿಂದು ಆಚರಿಸುವ ಸ್ಮರಣೋತ್ಸವವಾಗಿದೆ ಎಂದು ನುಡಿದರು.


ಧರ್ಮದರ್ಶಿ ಎಂ.ಬಿ.ಹಂಗರಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಗಣ್ಯರು, ವಟುಸಾಧಕರು, ಭಕ್ತರು, ಸುತ್ತಮುತ್ತಲಿನ ಗ್ರಾಮಗಳಿಂದ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.