
ಸಂಜೆವಾಣಿ ವಾರ್ತೆ,
ವಿಜಯಪುರ, ಫೆ. ೧೮:ಗುರುವಿನಲ್ಲಿ ದೇವರನ್ನು ಕಾಣುವ ಪರಂಪರೆ ನಮ್ಮದು. ತಂದೆ, ತಾಯಿ, ಗುರುವನ್ನು ಗೌರವಿಸುವಂಥ ಸಂಸ್ಕೃತಿ ನಮ್ಮದು. ಹರ ಪೂಜೆ, ಗುರು ಸೇವೆ ಬದುಕಿನಲ್ಲಿ ಮುಖ್ಯ ಎಂದು ನಾಗಠಾಣ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಮಂಗಳವಾರ ತಾಲೂಕಿನ ನಾಗಠಾಣ ಗ್ರಾಮದ ಉದಯಲಿಂಗೇಶ್ವರ ಮಠದಲ್ಲಿ ಮಹಾಶಿವರಾತ್ರಿ ನಿಮಿತ್ತ ಉದಯಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ದೇವರ ಸ್ಮರಣೆಯಿಂದ ಪ್ರತಿಯೊಬ್ಬರ ಬದುಕಿನಲ್ಲಿ ನೆಮ್ಮದಿ ಮೂಡಿ, ಧನಾತ್ಮಕ ಶಕ್ತಿಯ ಅನುಭವವಾಗುತ್ತದೆ. ದೇವರ ನಾಮ ಸ್ಮರಣೆಯು ಸರಳ ಜತೆಗೆ ಫಲಪ್ರದವಾಗಿದೆ. ಇದು ಎಲ್ಲರ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಯಶಸ್ಸನ್ನು ತರುತ್ತದೆ ಎಂದು ಹೇಳಿದರು.
ಜೈನಾಪುರದ ರೇಣುಕ ಶಿವಾಚಾರ್ಯರು ಮಾತನಾಡಿ, ದೇವರಲ್ಲಿ ಭಕ್ತಿ, ಶೃದ್ಧೆ, ನಂಬಿಕೆ ಇಡಬೇಕು. ಅದರಿಂದ ಸಕಲರಿಗೂ ಉತ್ತಮ ಫಲ ಸಿಗುತ್ತದೆ. ನಾಗಠಾಣವು ಎರಡನೇ ಶ್ರೀಶೈಲವಾಗಿದೆ. ಉದಯಲಿಂಗರ ಸ್ಮರಣೆ ಎಲ್ಲರಿಗೂ ಶ್ರೀರಕ್ಷೆ. ದೇವರ ಸ್ಮರಣೆಯು ನಮ್ಮಲ್ಲಿ ವಿಶ್ವ ಭ್ರಾತೃತ್ವದ ಭಾವವನ್ನು ಮೂಡಿಸುತ್ತದೆ ಎಂದರು.
ಕನ್ನೂರಿನ ಸೋಮನಾಥ ಶಿವಾಚಾರ್ಯರು ಮಾತನಾಡಿ, ಮಣ್ಣಿನ ಕಣ ಕಣದಲ್ಲೂ ಭಕ್ತಿಯನ್ನು ಮೆರೆದವರು ನಾಗಠಾಣದ ಜನತೆ. ನಮ್ಮ ಇಷ್ಟ ದೇವರು-ಗುರುವನ್ನು ಸದಾ ಸ್ಮರಿಸುತ್ತಿರಬೇಕು. ನಮ್ಮಲ್ಲಿ ವಿಶ್ವ ಪ್ರೀತಿಯ ಭಾವ ಮೂಡಿಸುವಲ್ಲಿ ದೇವರ ಸ್ಮರಣೆ ಮುಖ್ಯವಾಗಿದೆ ಎಂದು ಹೇಳಿದರು.
ಮಸೂತಿಯ ಪ್ರಭುಕುಮಾರ ಶಿವಾಚಾರ್ಯರು ಮಾತನಾಡಿ, ಅನಾದಿ ಕಾಲದಿಂದಲೂ ಗುರುವನ್ನು ಗೌರವಿಸುವ ಶ್ರೇಷ್ಠ ಸಂಸ್ಕೃತಿ, ಪರಂಪರೆ ಭಾರತದಲ್ಲಿದೆ.
ಗುರುವೆಂದರೆ ಜ್ಞಾನದ ಆತ್ಮನಿದ್ದಂತೆ. ಗುರುವನ್ನು ಅನುದಿನವು ಸ್ಮರಿಸಬೇಕು ಎಂದು ಹೇಳಿದರು.
ಬೊಮ್ಮನಳ್ಳಿಯ ಗುರುಶಾಂತ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗುರುವು ಅಂತರAಗದ ಬೆಳಕನ್ನು ಬೆಳಗುತ್ತ, ಬದುಕಿಗೆ ಮಾರ್ಗದರ್ಶಿಯಾಗಿ ಮೋಕ್ಷವನ್ನು ನೀಡುತ್ತಾನೆ. ಆತ ಇಡೀ ಮನುಕುಲಕ್ಕೆ ದಾರಿ ತೋರುವ ಮಹಾನುಭಾವ ಎಂದು ಹೇಳಿದರು.
ಧರ್ಮಸಭೆಗೂ ಮುಂಚೆ ಉದಯಲಿಂಗೇಶ್ವರ ದೇವರ ಅಡ್ಡ ಫಲ್ಲಕ್ಕಿ ಮಹೋತ್ಸವ ವಿವಿಧ ವಾದ್ಯ ಮೇಳ, ಭಜನಾ ತಂಡ, ಪುರವಂತರು, ಕುಂಭಮೇಳದೊAದಿಗೆ ಜರುಗಿತು. ಗಂಗನಳ್ಳಿ, ಕೆಂಗನಾಳ, ಹೊನ್ನಳ್ಳಿ, ನಾಗಠಾಣ, ಕವಲಗಿ ಗ್ರಾಮದ ದೇವರ ಫಲ್ಲಕ್ಕಿಗಳು ಜತೆಯಾಗಿ ಇಡೀ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ್ದು ವಿಶೇಷವಾಗಿತ್ತು.
ಶಿಕ್ಷಕ ಸಂತೋಷ ಬಂಡೆ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮದ ರಾವುತಪ್ಪ ಬಿಜ್ಜರಗಿ, ವಿಶ್ವನಾಥ ಕಲಗೊಂಡ, ಸುರೇಶ ಕತ್ನಳ್ಳಿ, ಶಂಕರಗೌಡ ಪಾಟೀಲ, ಶ್ರೀಶೈಲ ಕತ್ನಳ್ಳಿ, ರಾಮು ಹಂಡಿ, ಸುಭಾಷ ಮಸಳಿ, ಮುತ್ತು ಕತ್ನಳ್ಳಿ, ಮಹಾದೇವ ಲೋಣಿ, ಸುಭಾಷ ಕತ್ನಳ್ಳಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ತಾಯಂದಿರು, ಮಕ್ಕಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.






















