
ಬೀದರ್: ಡಿ.೨೯:ನಗರದ ವೈಕುಂಠಪುರಿ ಓಡವಾಡದಲ್ಲಿರುವ ಶ್ರೀ ಕ್ಷೇತ್ರ ಅನಂತಶಯನ (ವೆಂಕಟೇಶ್ವರ) ಮಂದಿರದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಡಿಸೆಂಬರ್ ೩೦ ಮಂಗಳವಾರ ಭವ್ಯ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಹಿಂದೂ ಸಂಸ್ಕೃತಿ ಹಾಗೂ ಸಂಪ್ರದಾಯದ ಪ್ರಕಾರ ವೈಕುಂಠ ಏಕಾದಶಿಗೆ ವಿಶೇಷ ಮಹತ್ವವಿದ್ದು, ಈ ದಿನ ಭಗವಂತನ ದರ್ಶನದಿಂದ ಸುಖ, ಶಾಂತಿ ಮತ್ತು ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ವೈಕುಂಠದ ಬಾಗಿಲು ತೆರೆದಿರುತ್ತದೆ ಎಂಬ ಪ್ರತೀತಿಯ ಹಿನ್ನೆಲೆಯಲ್ಲಿ ಸಹಸ್ರಾರು ಭಕ್ತರು ದೇವಾಲಯಕ್ಕೆ ಆಗಮಿಸುವ ನಿರೀಕ್ಷೆಯಿದೆ. ಉಪವಾಸ ವ್ರತ ಆಚರಿಸಿ ದೇವರ ದರ್ಶನ ಪಡೆದರೆ ಪಾಪನಾಶವಾಗಿ ಮೋಕ್ಷಪ್ರಾಪ್ತಿ ದೊರೆಯುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.
ಬೆಳಗ್ಗೆ ೫ ರಿಂದ ರಾತ್ರಿ ೧೦ ಗಂಟೆಯವರೆಗೆ ನಿರಂತರವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಮುಂಜಾನೆ ೫ ಗಂಟೆಗೆ ಸುಪ್ರಭಾತ, ಮಹಾಪೂಜೆ ಹಾಗೂ ವಿವಿಧ ಅಭಿಷೇಕಗಳು ಜರುಗಲಿವೆ. ದೇವಾಲಯವನ್ನು ವಿವಿಧ ಬಗೆಯ ಹೂಗಳಿಂದ ಭವ್ಯವಾಗಿ ಅಲಂಕರಿಸಲಾಗುತ್ತದೆ.
ಬೆಳಿಗ್ಗೆ ೧೧ ಗಂಟೆಗೆ ಪದ್ಮಾಕರ ಮಹಾರಾಜರಿಂದ ಚಕ್ರಿ ಭಜನೆ, ಮಧ್ಯಾಹ್ನ ೧ ಗಂಟೆಗೆ ಶ್ರೀ ಮಾಣಿಕಪ್ರಭು ಭಜನ ಮಂಡಳಿಯಿAದ ಭಜನೆ, ಸಂಜೆ ೫ ಗಂಟೆಗೆ ಬೀದರ್ ಇಸ್ಕಾನ್ ಮಂದಿರದ ವತಿಯಿಂದ ಪ್ರವಚನ ಹಾಗೂ ಭಜನೆ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ ೧೦ ಗಂಟೆಗೆ ಮಹಾ ಮಂಗಳಾರತಿ ನೆರವೇರಲಿದೆ. ದಿನವಿಡೀ ವಿಷ್ಣು ಸಹಸ್ರನಾಮ ಪಾರಾಯಣಕ್ಕೆ ಭಕ್ತರು ಭಾಗವಹಿಸಲಿದ್ದಾರೆ.
ಈ ವೈಶಿಷ್ಟ್ಯಪೂರ್ಣ ಪುಣ್ಯ ಪರ್ವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಮಂದಿರ ಸಮಿತಿಯ ಗೌರವಾಧ್ಯಕ್ಷ ಅಶೋಕ ರೇಜಂತಲ್ ಹಾಗೂ ಅಧ್ಯಕ್ಷ ದಿಗಂಬರ ಪೊಲಾ ಮನವಿ ಮಾಡಿದ್ದಾರೆ.
























