
ಕೋಲಾರ,ಡಿ,೨೬- ಧಾರ್ಮಿಕ ಆಚರಣೆಗಳು ಮನುಷ್ಯನಲ್ಲಿ ಸಂಸ್ಕಾರವನ್ನು ಜಾಗೃತಗೊಳಿಸುತ್ತವೆ ಮತ್ತು ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ಬಂಗಾರಪೇಟೆ ತಾಲ್ಲೂಕಿನ ಮಾಗೊಂದಿ ಶನೇಶ್ವರಸ್ವಾಮಿದೇವಾಲಯದ ಮುನೇಶ್ವರ ಸ್ವಾಮೀಜಿಗಳು ತಿಳಿಸಿದರು.
ತಾಲ್ಲೂಕಿನ ಚಿಟ್ನಹಳ್ಳಿಯ ತೊಟ್ಲಿ ಗೇಟ್‌ನಲ್ಲಿರುವ ಅವಧೂತ ದತ್ತಾತ್ರೇಯ,ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ೪೮ನೇ ದಿನದ ಮಂಡಲ ಪೂಜಾ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಒಳ್ಳೆಯ ಮಳೆ,ಬೆಳೆಗಾಗಿ ಪ್ರಾರ್ಥಿಸೋಣ ಎಂದ ಅವರು, ಆಧುನಿಕತೆಯ ಬದುಕಿನಲ್ಲಿ ನಾವಿಂದು ತೇಲುತ್ತಿದ್ದು, ಸಂಸ್ಕಾರ,ಹಿರಿಯರಿಗೆ ಗೌರವ ನೀಡುವುದನ್ನು ಮರೆಯುತ್ತಿದ್ದೇವೆ, ಮೊಬೈಲ್‌ಗೆ ದಾಸರಾಗಿ ಜೀವನ ನಡೆಸುತ್ತಿದ್ದೇವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಸಂಸದ ಮಲ್ಲೇಶಬಾಬು ಮಾತನಾಡಿ, ಶಿರಡಿ ಸಾಯಿಬಾಬಾ ಮಠದ ಧರ್ಮಾಧಿಕಾರಿ ಸಿಂಹ ವೆಂಕಟೇಶ್ ಉತ್ತಮ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದ್ದಾರೆ, ಇಲ್ಲಿ ಅನಾಥಾಶ್ರಮ ಮಾಡುವ ಅವರ ಆಶಯ ಈಡೇರಲಿ ಎಂದು ಆಶೀಸಿದ ಅವರು, ಇಲ್ಲಿನ ಅಭಿವೃದ್ದಿಗೆ ಅಗತ್ಯವಾದ ಅನುದಾನ ಒದಗಿಸುವ ಭರವಸೆ ನೀಡಿದರು.
ಸಮಾಜ ನಮಗೇನು ನೀಡಿದೆ ಎನ್ನುವ ಮೊದಲು ನಮ್ಮಿಂದ ಸಮಾಜಕ್ಕೆ ಏನು ಸಿಕ್ಕಿದೆ ಎಂಬುದನ್ನು ಅರಿಯಬೇಕು ಎಂದ ಅವರು, ಅಧಿಕಾರಿ ಇರುತ್ತದೆ, ಹೋಗುತ್ತದೆ ಆದರೆ ಮಾಡಿದ ಕೆಲಸ ಮತ್ತು ನಮ್ಮ ನಡತೆ ನಮ್ಮ ನೆನಪನ್ನು ಜನರಮನದಲ್ಲಿ ಶಾಶ್ವತವಾಗಿ ನಿಲ್ಲುವಂತರೆ ಮಾಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೆಂಕಟಶಿವಾರೆಡ್ಡಿ, ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಕೇಂದ್ರವಾಗಿ ಇಂದು ಚಿಟ್ನಹಳ್ಳಿಯ ಶಿರಡಿ ಸಾಯಿಬಾಬಾ ಮಠ ಹೆಸರು ಗಳಿಸಿದೆ, ದಾನಿಗಳ ನೆರವಿನಿಂದ ಇಷ್ಟೊಂದು ಅಭಿವೃದ್ದಿ ಮಾಡಿದ್ದು, ತಾವು ಸಹಾ ಮತ್ತಷ್ಟು ನೆರವು ಒದಗಿಸುವುದಾಗಿ ತಿಳಿಸಿದರು.
ತಮ್ಮ ಅವಧಿಯಲ್ಲಿ ದೇವಾಲಯಗಳ ಅಭಿವೃದ್ದಿಗೆ ಸುಮಾರು ೫ ಕೋಟಿ ರೂ ಅನುದಾನ ನೀಡಿದ್ದೇನೆ, ಜನರ ಋಣ ನನ್ನ ಮೇಲಿದ್ದು, ಅದನ್ನು ತೀರಿಸುವ ಸಣ್ಣ ಪ್ರಯತ್ನ ನನ್ನದಾಗಿದ್ದು, ಅದಕ್ಕೆ ದೇವರ ಅನುಗ್ರಹವೂ ಅಗತ್ಯವಿದೆ ಎಂದರು.
ಧರ್ಮಾಧಿಕಾರಿ ಸಿಂಹ ವೆಂಕಟೇಶ್ ಮಾತನಾಡಿ, ದತ್ತಾತ್ರೇಯಸ್ವಾಮಿ ಪ್ರತಿಷ್ಟಾಪನೆಗೊಂಡು ೪೮ ದಿನವಾಗಿದ್ದು, ಇಂದು ಮಂಡಲ ಪೂಜೆ ನಡೆಯುತ್ತಿದೆ, ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿದ್ದು, ಈ ಮಠವನ್ನು ಮತ್ತಷ್ಟು ಅಭಿವೃದ್ದಿಗೊಳಿಸುವುದರ ಜತೆಗೆ ಸಮುದಾಯಭವನವಾಗಿ ಬಡವರಿಗೆ ಮದುವೆ ಮಾಡಿಕೊಳ್ಳಲು ಅಗತ್ಯವಾದ ಎಲ್ಲಾ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.
ಆಗಮಿಕರಾದ ಪಲಮನೇರ್‌ನ ನಲ್ಲಪಟ್ಲ ಗುರುಪ್ರಸಾದ್ ತಂಡದಿಂದ ಪೂಜಾ ಕಾರ್ಯಗಳು ನಡೆಯಿತು. ಗುರುಪ್ರಾರ್ಥನೆ, ಮಹಾಗಣಪತಿ ಪೂಜೆ, ನಂದಿ ಪೂಜೆ, ಅಭಿಷೇಕ, ದತ್ತಾತ್ರೆಯ ಪೂಜೆ, ಗ್ರಾಮ ದೇವತಾ ಪೂಜೆ, ವೇದ ಪಾರಾಯಣ, ಕಾಕಾಡಾರತಿ, ಗಣಪತಿ ಹೋಮ, ಲಕ್ಷ್ಮೀಹೋಮ, ಸುದರ್ಶನ ಹೋಮ, ನವಗ್ರಹಹೋ ಮತ್ತಿತರ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಮುಖಂಡ ಮದನಹಳ್ಳಿ ಶಶಿಧರ್,ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಸದಸ್ಯ ಚೌಡರೆಡ್ಡಿ, ಮುಖಂಡ ಸುಬ್ರಮಣಿ, ನಿವೃತ್ತ ಪೊಲೀಸ್ ಅಧಿಕಾರಿ ಅಶ್ವಥ್ಥರೆಡ್ಡಿ, ಸಮಾಜಸೇವಕ ನರಸಿಂಹಯ್ಯ, ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಕಾಡುಗೌಡಹಳ್ಳಿ ತಿಮ್ಮಾರೆಡ್ಡಿ, ಸೀಕಲ್ ರಾಮಕೃಷ್ಣಪ್ಪ, ಉರಟಿ ಅಗ್ರಹಾರ ಸಂಪತ್, ವೆಂಕಟೇಗೌಡ ಮತ್ತಿತರರು ಉಪಸ್ಥಿತರಿದ್ದರು.
























