Home ಜಿಲ್ಲೆ ಧರ್ಮವೇ ಮಾನವ ಜೀವನಕ್ಕೆ ದಾರಿದೀಪ

ಧರ್ಮವೇ ಮಾನವ ಜೀವನಕ್ಕೆ ದಾರಿದೀಪ

ರಬಕವಿ-ಬನಹಟ್ಟಿ,ಫೆ.15: ಧರ್ಮವು ಮಾನವನ ಬದುಕಿಗೆ ಶಿಸ್ತಿನ ಮಾರ್ಗವನ್ನು ಕಲಿಸುವುದರೊಂದಿಗೆ ಜೀವನಕ್ಕೆ ಧರ್ಮವೇ ದಾರಿ ದೀಪವಾಗಿದೆಯೆಂದು ಹಳೇ ಹುಬ್ಬಳ್ಳಿಯ ಶ್ರೀವೀರಭಿಕ್ಷಾವರ್ತಿನೀಲಕಂಠ ಮಠದ ಜಗದ್ಗುರು ಯೋಗಾಚಾರ್ಯ ಶ್ರೀಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.


ತಾಲೂಕಿನ ನಾವಲಗಿ ಗ್ರಾಮದ ಶ್ರೀನೀಲಕಂಠೇಶ್ವರ ಮಠದಲ್ಲಿ ಶಿವರಾತ್ರಿ ನಿಮಿತ್ಯ ಜರುಗುತ್ತಿರುವ ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಧರ್ಮವನ್ನು ಪಾಲಿಸುವುದರಿಂದ ವ್ಯಕ್ತಿಯ ಮನಸ್ಸು ಶುದ್ಧವಾಗುತ್ತದೆ ಜೊತೆಗೆ ದಾನ-ಧರ್ಮ-ಪರೋಪಕಾರ ಸೇವಾ ಮನೋಭಾವದಿಂದ ಮಾಡಿದ ಕಾರ್ಯಗಳು ಮಾನವನ ಜೀವನವನ್ನು ಪವಿತ್ರಗೊಳಿಸುತ್ತದೆಯೆಂದರು.


ಪ್ರತಿಯೊಬ್ಬರು ದೇವರ ಮೇಲೆ ನಂಬಿಕೆ ಇಟ್ಟು ಸತ್ಕಾರ್ಯಗಳಲ್ಲಿ ತೊಡಗಿದಾಗ ಮಾತ್ರ ಜೀವನವು ಶಾಂತಿ ಹಾಗೂ ನೆಮ್ಮದಿಯನ್ನು ಕಾಣುತ್ತದೆ. ಭಾರತೀಯ ಸಂಸ್ಕøತಿಯಲ್ಲಿ ದೇವರು ಗುರು ಪರಂಪರೆಯು ಮಹತ್ವದಾಗಿದೆ. ಸಮಾಜದಲ್ಲಿ ಶೋಷಿತ ಮತ್ತು ದುಃಖಿತ ವರ್ಗಗಳ ಜನರ ಕಣ್ಣಿರು ಒರೆಸುವಂತಾಗಬೇಕು. ವಿದ್ಯೆ ಮಾನವನಿಗೆ ಬೆಳಕು ನೀಡುವ ಶಾಶ್ವತ ಸಂಪತ್ತು ಎಂದು ಹೇಳಿದರು.


ಕಂಕನವಾಡಿಯ ಮಾರುತಿ ಶರಣರು ಮಾತನಾಡಿ ಜ್ಞಾನ ಮಾನವನಿಗೆ ಸತ್ಯ ಅಸತ್ಯ ತಿಳಿಸುವ ಬೆಳಕು. ಜ್ಞಾನವಿಲ್ಲದೆ ಮಾನವನು ಅಜ್ಞಾನದಲ್ಲಿ ಬದುಕುತ್ತಾನೆ, ಭಕ್ತಿ ಮನಸ್ಸನ್ನು ಶುದ್ಧಗೊಳಿಸಿ ದೇವರತ್ತ ನಡೆಸುವ ದಾರಿ,ಭಕ್ತಿ ಇದ್ದರೆ ಅಹಂಕಾರ ಕಡಿಮೆಯಾಗುತ್ತದೆ. ಜ್ಞಾನವಿದ್ಧು ಭಕ್ತಿ ಇಲ್ಲದಿದ್ದರೆ ಗರ್ವಕ್ಕೆ ಕಾರಣ ಭಕ್ತಿ ಇದ್ದು ಜ್ಞಾನ ಇಲ್ಲದಿದ್ದರೆ ಅಂಧ ನಂಬಿಕೆ. ಜ್ಞಾನ ಮತ್ತು ಭಕ್ತಿ ಎರಡನ್ನು ಸಮಾನವಾಗಿ ಪಾಲಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆಯೆಂದರು.


ಈ ಸಂದರ್ಭದಲ್ಲಿ ಕಂಕನವಾಡಿಯ ಪಪೂ ಮಾರುತಿ ಶರಣರು, ಬಸಯ್ಯ ಹಿರೇಮಠ, ಸುಭಾಸ ಕಂಪು, ಕಾಡಯ್ಯ ಕಾಡದೇವರ, ಶಿವನಪ್ಪ ಹಳ್ಳಿ, ಚಿನ್ನಪ್ಪ ಸಂಗಾನಟ್ಟಿ, ಈರಪ್ಪ ಬಿದರಿ, ಮಲ್ಲಪ್ಪ ಹೂಗಾರ, ಅಪ್ಪಾಶಿ ಕಾಂತಿ, ಮುದುಕಪ್ಪ ಜನವಾಡ, ಗಂಗಪ್ಪ ಅಮ್ಮಲ್ಲಜೇರಿ, ಮಂಜುನಾಥ ಕಂಪು, ಪರಮಾನಂದ ಹಳ್ಳಿ, ಬಸವರಾಜ ಜನವಾಡ ಸೇರಿದಂತೆ ಅನೇಕರಿದ್ದರು.