ಶಿಕ್ಷಾಬಂದಿಗಳಿಗೆ ಪೆರೋಲ್ ಮೇಲೆ ಬಿಡುಗಡೆ : ಅರಿವು ಕಾರ್ಯಕ್ರಮ

ಕಲಬುರಗಿ,ನ.30: ನಗರದ ಕೇಂದ್ರ ಕಾರಾಗೃಹದಲ್ಲಿರುವ ಶಿಕ್ಷಾ ಬಂದಿಗಳಿಗೆ ಕೇಂದ್ರ ಕಾರಾಗೃಹ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಶಿಕ್ಷಾಬಂದಿಗಳಿಗೆ ಪೆರೋಲ್ ಮೇಲೆ ಬಿಡುಗಡೆ ಕುರಿತು ಅರಿವಿನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ, ಅವರು ಮಾತನಾಡುತ್ತಾ, ಪೆರೋಲ್ ಅಂದರೆ ತಾತ್ಕಾಲಿಕ ಬಿಡುಗಡೆ ಈ ಅವಧಿಯಲ್ಲಿ ತಮಗೆ ನಿಗದಿಗೊಳಿಸಿದ ದಿನಾಂಕದೊಳಗೆ ಅಂದರೆ 1 ತಿಂಗಳ ಪೆರೋಲ್ ಮೇಲೆ ಬಿಡುಗಡೆ ಹೊಂದಿದ್ದರೆ ತಾವು ತಿಂಗಳ ಕೊನೆಯ ದಿನಾಂಕಕ್ಕೆ ಕಾರಾಗೃಹಕ್ಕೆ ಬಂದು ವರದಿಯನ್ನು ಮಾಡಕೊಳ್ಳತಕ್ಕದ್ದು, ಒಂದು ವೇಳೆ ಒಂದು ದಿನ ತಡವಾದರೂ ಅದು ಕಾನೂನಿನ ಅಡಿಯಲ್ಲಿ ಅಪರಾಧವಾಗುತ್ತದೆ. ಆಗ ತಮಗೆ 2 ವರ್ಷಗಳ ಹೆಚ್ಚುವರಿ ಶಿಕ್ಷೆಯನ್ನು ನೀಡಲಾಗುತ್ತದೆ. ಈಗಾಗಲೇ ತಮಗೆ ನೀಡಿರುವ ಶಿಕ್ಷಾ ಅವಧಿಯ ಜೊತೆಗೆ ಹೆಚ್ಚುವರಿಯಾಗಿ 2 ವರ್ಷ ಜೈಲು ಕಳೆಯಬೇಕಾಗುತ್ತದೆ. ಆದ್ದರಿಂದ ತಾವುಗಳು ಪೆರೋಲ್ ಅವಧಿಯಲ್ಲಿ ನೀಡಿದ ದಿನಾಂಕಕ್ಕೆ ಮರಳಿ ಹೆಚ್ಚುವರಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಿ, ಅಲ್ಲದೆ ತಾವುಗಳು ತಮ್ಮ ಜೊತೆ ನಿಷೇಧಿತ ವಸ್ತುಗಳು ಸಿಕ್ಕರು ಕೂಡಾ ಶಿಕ್ಷೆಯ ಜೊತೆಗೆ ಹೆಚ್ಚುವರಿ ಶಿಕ್ಷೆ ಅನುಭಸಬೇಕಾಗುತ್ತದೆ. ಆದ್ದರಿಂದ ಇಲ್ಲಿ ತಾವುಗಳು ಕಾನೂನಿನ ಕಾಯಿದೆ ನಿಯಮಗಳನ್ನು ಪಾಲಿಸುವಂತೆ ಹಾಗೂ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಸಿಬ್ಬಂದಿಗಳು ತಮ್ಮ ಕರ್ತವ್ಯದಲ್ಲಿ ಕುಂದು-ಕೊರತೆಗಳು, ಯಾವುದೇ ತೊಂದರೆಗಳು ಉಂಟಾದರೆ ನೇರವಾಗಿ ನ್ಯಾಯಾಲಯಕ್ಕೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುಖ್ಯ ಅಧೀಕ್ಷಕರಾದ ಡಾ. ಅನೀತಾ ಆರ್. ಅವರು ಮಾತನಾಡುತ್ತಾ ಪೆರೋಲ್ ಮೇಲೆ ಎರಡು ರೀತಿಯಲ್ಲಿ ಬಿಡುಗಡೆÀಗೆ ಅವಕಾಶವಿದೆ. ಒಂದು ಸಾಮಾನ್ಯ ಬಿಡುಗಡೆ, ಇನ್ನೊಂದು ತುರ್ತು ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಪೆರೋಲ್ ಅವಧಿಯನ್ನು ತಾವುಗಳು 1 ತಿಂಗಳಿಂದ 3 ತಿಂಗಳವರೆಗೆ ವಿಸ್ತರಿಸಲು ಅವಕಾಶವಿದೆ. ಬಂದಿಗಳು ಪೆರೋಲ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು, ನಿಯಮಗಳನ್ನು ಅರಿತು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ಪೆರೋಲ್ ಮೇಲೆ ತೆರಳಲು ಕನಿಷ್ಠ ವಿಚಾರಣಾ ಅವಧಿ ಸೇರಿ 2 ವರ್ಷಗಳು ಪೂರೈಸಿದವರಿಗೆ ಬಿಡುಗಡೆಗೆ ಅವಕಾಶವಿರುತ್ತದೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ಅಧೀಕ್ಷಕ ಎಂ. ಹೆಚ್. ಆಶೇಖಾನ್, ಸಹಾಯಕ ಅಧೀಕ್ಷಕ ಚನ್ನಪ್ಪ, ಈ ಸಂಸ್ಥೆಯ ಜೈಲರ್‍ಗಳಾದ ಸುನಂದಾ ವಿ., ಪುಂಡಲೀಕ ಟಿ.ಕೆ, ಶ್ಯಾಮ ಬಿದ್ರಿ ಹಾಗೂ ಎಲ್ಲಾ ಅಧಿಕಾರಿ,ಸಿಬ್ಬಂದಿಗಳು ಭಾಗವಹಿಸಿದ್ದರು. ಸಂಸ್ಥೆಯ ಶಿಕ್ಷಕ ನಾಗರಾಜ ಮೂಲಗೆ ನಿರೂಪಿಸಿದರು