ತುಮಕೂರು, ಅ. ೬- ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಈಗಾಗಲೇ ಅಕ್ಟೋಬರ್ ೧ ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ರೈತರು ಹತ್ತಿರದ ನೋಂದಣಿ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಲು ಅವಕಾಶವಿದೆ. ಈ ಕುರಿತು ರೈತರಿಗೆ ಮಾಹಿತಿ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರವು ಪ್ರಸಕ್ತ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಪ್ರತಿ ಕ್ವಿಂಟಾಲ್ ರಾಗಿಗೆ ೪,೮೮೬ ರೂ.ಗಳನ್ನು ನಿಗದಿಪಡಿಸಲಾಗಿದೆ. ರಾಗಿ ಖರೀದಿಗಾಗಿ ನೋಂದಣಿ ಮಾಡಿಸಲು ಡಿಸೆಂಬರ್ ೧೫ ರವರೆಗೆ ಕಾಲಾವಕಾಶವಿದೆ ಎಂದು ತಿಳಿಸಿದರು.
೨೦೨೬ನೇ ಜನವರಿ ೧ ರಿಂದ ಮಾರ್ಚ್ ೩೧ ರವರೆಗೆ ರಾಗಿ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಅವರು ಹೇಳಿದರು.
ರಾಗಿ ನೋಂದಣಿ / ಖರೀದಿ ಕೇಂದ್ರಗಳಲ್ಲಿ ರೈತರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ ಸ್ಥಳದಲ್ಲಿ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಬೇಕು ಎಂದು ಎಪಿಎಂಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಖರೀದಿ ಕೇಂದ್ರಗಳಿಗೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಳ್ಳುವಂತೆ ಕೆಎಫ್‌ಸಿಎಸ್‌ಸಿಯ ಜಿಲ್ಲಾ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ನೋಂದಣಿ ಕೇಂದ್ರದ ವಿವರ
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೊಸ ಸರ್ಕಾರಿ ಆಸ್ಪತ್ರೆ ಹಿಂಭಾಗ ಇರುವ ಎಪಿಎಂಸಿ ಗೋದಾಮು ಹಾಗೂ ಹುಳಿಯಾರಿನ ಎಪಿಎಂಸಿ ಗೋದಾಮು, ಕುಣಿಗಲ್ ತಾಲ್ಲೂಕು ಬೆಂಗಳೂರು ರಸ್ತೆಯಲ್ಲಿರುವ ಎಪಿಎಂಸಿ ಗೋದಾಮಿನಲ್ಲಿ ೨ ಕೇಂದ್ರ, ತಿಪಟೂರು ಎಪಿಎಂಸಿ ಗೋದಾಮು, ತುರುವೇಕೆರೆ ಎಪಿಎಂಸಿ ಗೋದಾಮು, ಗುಬ್ಬಿ ಎಪಿಎಂಸಿ ಗೋದಾಮು, ಮಧುಗಿರಿಯ ಗೌರಿಬಿದನೂರು ರಸ್ತೆಯಲ್ಲಿರುವ ಎಪಿಎಂಸಿ ಗೋದಾಮು, ಶಿರಾ ಎಪಿಎಂಸಿ ಗೋದಾಮು, ಕೊರಟಗೆರೆ ಅಕ್ಕಿರಾಂಪುರ ಪಿಡಿಎಸ್ ಗೋದಾಮು ಹಾಗೂ ತುಮಕೂರು ಬಟವಾಡಿಯಲ್ಲಿನ ಎಪಿಎಂಸಿ ಗೋದಾಮು ಸೇರಿದಂತೆ ೧೧ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕಿ ಸೌಮ್ಯ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಮೇಶ್, ಎಪಿಎಂಸಿ ಉಪನಿರ್ದೇಶಕ ರಾಜಣ್ಣ, ಕರ್ನಾಟಕ ಆಹಾರ ನಿಗಮ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ತನ್ವೀರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.



























