
ಕಲಬುರಗಿ:ಜು.30: ಯಾವುದೇ ಒಂದು ಪ್ರದೇಶದ ಜನಜೀವನದ ವೈಶಿಷ್ಟ್ಯಗಳಾದ ಭಾಷೆ, ಸಂಪ್ರದಾಯ, ಜನಪದ, ಉಡುಪು, ವಿಚಾರಗಳು, ಅನುಭವಗಳು ಮತ್ತು ಬೌಗೋಳಿಕ ಗುಣಲಕ್ಷಣಗಳನ್ನು ಚಿತ್ರಕಲಾಕೃತಿಯೊಂದರಲ್ಲಿ ಸಾಕಷ್ಟು ವಿವರವಾಗಿ ಅಳವಡಿಸಿಕೊಂಡಾಗ ಅಂತಹ ಕಲಾಕೃತಿಯಲ್ಲಿ ಪ್ರಾದೇಶಿಕ ಅಸ್ಮಿತೆಯನ್ನು ಗುರುತಿಸಬಹುದು ಎಂದು ಹಿರಿಯ ಚಿತ್ರಕಲಾವಿದ ಚಂದ್ರಹಾಸ ಜಾಲಿಹಾಳ ಹೇಳಿದರು.
ದಿ ಆರ್ಟ್ ಇಂಟ್ರಿಗೇಶನ್ ಚಿತ್ರಕಲಾ ಮಹಾವಿದ್ಯಾಲಯದ ಅಂಕುರ ಕಲಾ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ ಕವಿತಾ ಎಸ್. ಕಟ್ಟೆ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ ಕವಿತಾ ಎಸ್. ಕಟ್ಟೆ ಅವರ ಕಲಾಕೃತಿಗಳಲ್ಲಿ ಅವರು ಬೆಳೆದ ಗ್ರಾಮೀಣ ಪ್ರದೇಶದಲ್ಲಿರುವ ಕೌದಿ, ಬೀಸುವ ಕಲ್ಲು, ತೊಟ್ಟಿಲು, ಅಡಕಲು ಗಡಿಗೆಗಳು ಹೀಗೆ ಹಲವಾರು ಗ್ರಾಮೀಣ ಮತ್ತು ಜನಪದ ದೃಶ್ಯ, ಸಂದರ್ಭ ಮತ್ತು ಆಚರಣೆಗಳೆಲ್ಲ ಅವರ ಸ್ಮøತಿ ಪಟಲದಲ್ಲಿ ಅಚ್ಚೊತ್ತಿ ಹರಳುಗೊಂಡ ಅನುಭವಗಳ ಅಭಿವ್ಯಕ್ತಿ ತೀವ್ರತೆಯಿಂದ ಚಿತ್ರಗಳಾಗಿ ಮೂಡಿ ಬಂದಿವೆ.
ವಿಶೇಷವಾಗಿ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಕಸೂತಿಯಾದ ಕೌದಿಯನ್ನು ಮುಖ್ಯ ಆಕರವಾಗಿಟ್ಟುಕೊಂಡ ಸರಣಿ ಚಿತ್ರ್ರಕಲಾಕೃತಿಗಳನ್ನು ರಚಿಸಿದ್ದಾರೆ. ಇವರ ಕಲಾಕೃತಿಗಳಲ್ಲಿ ಗ್ರಾಮೀಣ ಪ್ರದೇಶದ ಜನಪದೀಯ ಅಂಶಗಳೊಂದಿಗೆ ಸ್ತ್ರೀ ಸಂವೇದನೆಯನ್ನು ಕಾಣಬಹುದಾಗಿದೆ. ಭಾರತದ ಖ್ಯಾತ ಸಮಕಾಲೀನ ಕಲಾವಿದ ಜಿ. ಆರ್. ಈರಣ್ಣ ಅವರು ಕೂಡ ತಮ್ಮ ಕಲಾಕೃತಿಗಳಲ್ಲಿ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ವೈಶಿಷ್ಟ್ಯಗಳನ್ನು ಗಣನೀಯವಾಗಿ ದುಡಿಸಿಕೊಂಡಿದ್ದಾರೆ ಎಂದರು.
ದಿ ಆರ್ಟ್ ಇಂಟಿಗ್ರೇಶನ್ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ನೀಲಮ್ಮ ಬೆಳಮಗಿ ಮುಖ್ಯ ಅತಿಥಿಯಾಗಿ ಮಾತನಾಡಿ ಆಧುನಿಕತೆಯ ಭರಾಟೆಯಲ್ಲಿ ಜನಪದ ವಸ್ತು-ವಿಷಯಗಳನ್ನೊಳಗೊಂಡ ಕವಿತಾ ಅವರ ಕಲಾಕೃತಿಗಳು ಮನಸ್ಸಿಗೆ ನೆಮ್ಮದಿ ನೀಡಿ ಬಾಲ್ಯದ ನೆನಪುಗಳನ್ನು ಮರುಕಳಿಸುತ್ತವೆ ಎಂದರು.
ಚಿತ್ರಕಲಾವಿದ ಬಸವರಾಜ ವಿ. ಕಮಾಜಿ ಮಾತನಾಡಿದರು. ದಿ ಆರ್ಟ್ ಇಂಟ್ರಿಗೇಶನ್ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಂ. ಎಚ್. ಬೆಳಮಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಜನಪದ ಕಸೂತಿ ಕಲಾವಿದೆಯರಾದ ಇಂದುಬಾಯಿ ಕಟ್ಟೆ ಮತ್ತು ಗೋದುಬಾಯಿ ಬುಜುರ್ಕೆ ಅವರನ್ನು ಸನ್ಮಾನಿಸಲಾಯಿತು. ಕಲಾವಿದೆ ಕವಿತಾ ಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದರಾದ ವ್ಹಿ.ಬಿ. ಬಿರಾದಾರ, ವೀರೇಂದ್ರ ಶಾಹ, ಅಶೋಕ್ ಶೆಟಕಾರ, ರಾಜಕುಮಾರ ಕಾಳೆ, ಜಿತೇಂದ್ರ ಕೊಥಳೀಕರ್. ನಿಂಗಣ್ಣ ಕೇರಿ, ಗಿರೀಶ್ ಕುಲಕರ್ಣಿ, ನಾಗರಾಜ ಕುಲಕರ್ಣಿ, ಜಲಜಾಕ್ಷಿ ಕುಲಕರ್ಣಿ, ಗೋಪಾಲ್ ಕೆ. ಪಿ, ವಿಜಯ ಔರಾದ, ಸುರೇಶ್ ಸಿ.ಎಂ, ಪ್ರಶಾಂತಕುಮಾರ್ ಜಿ ಮತ್ತು ಚಿತ್ರಕಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಲ್ಲಿಕಾರ್ಜುನ ಮುಗುಳಿ ಸ್ವಾಗತಿಸಿದರು. ಬಿ. ಎನ್. ಪಾಟೀಲ್ ನಿರೂಪಿಸಿದರು. ಹಣಮಂತ ಬಾಡದ್ ವಂದಿಸಿದರು.































