೬೦೦ ಪಿಎಸ್‌ಐಗಳ ನೇಮಕಾತಿ

ಬೆಳಗಾವಿ, ಡಿ. ೧೬-ರಾಜ್ಯದಲ್ಲಿ ಹೊಸದಾಗಿ ೬೦೦ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ವಿಧಾನಸಭೆಯಲ್ಲಿಂದು ಹೇಳಿದರು.


ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಚನ್ನಬಸಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಐದು ವರ್ಷಗಳಿಂದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿ ಆಗಲಿಲ್ಲ.

೫೪೦ ಪೊಲೀಸ್ ನೇಮಕಾತಿ ಹಗರಣವಾಗಿ ರದ್ದಾಯಿತು ನಂತರ ೪೦೨ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿ ಆದರೂ ಅದು ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಇದಾದ ಬಳಿಕ ೯೫೭ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿ ಪೂರ್ಣಗೊಳಿಸಿ ಅವರೆಲ್ಲಾ ೭-೮ ತಿಂಗಳಿಂದ ತರಬೇತಿಯಲ್ಲಿದ್ದಾರೆ. ಸುವರ್ಣಸೌಧಕ್ಕೆ ಈ ಹೊಸ ಸಬ್‌ಇನ್ಸ್‌ಪೆಕ್ಟರ್‌ಗಳನ್ನು ತರಬೇತಿಗೆ ಹಾಕಿದ್ದೇವೆ. ಇನ್ನೆರಡು ತಿಂಗಳಲ್ಲಿ ಹೊಸದಾಗಿ ನೇಮಕಾತಿಗೊಂಡಿರುವ ೯೫೭ ಸಬ್ ಇನ್ಸ್‌ಪೆಕ್ಟರ್ ಖಾಲಿ ಇರುವ ಹುದ್ದೆಗಳಿಗೆ ಸ್ಥಳ ನಿಯುಕ್ತಿ ಮಾಡುತ್ತೇವೆ ಎಂದು ತಿಳಿಸಿದರು.


ಹೊಸದಾಗಿ ಮತ್ತೆ ೬೦೦ ಪೊಲೀಸ್ ನೇಮಕಾತಿಗೆ ಆರ್ಥಿಕ ಇಲಾಖೆಯ ಅನುಮೋದನೆ ಕೇಳಿದ್ದೇವೆ. ಅನುಮೋದನೆ ಸಿಕ್ಕ ತಕ್ಷಣ ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.


ಶಿವಮೊಗ್ಗ ಜಿಲ್ಲೆಗೆ ಆಯುಕ್ತರ ಕಚೇರಿಯನ್ನು ನೀಡುವ ಬಗ್ಗೆ ಪಿರಶೀಲನೆ ನಡೆದಿದೆ. ಶಿವಮೊಗ್ಗ, ವಿಭಾಗೀಯ ಜಿಲ್ಲಾ ಸ್ಥಳವಾಗಿದೆ. ಆಯುಕ್ತರ ಕಚೇರಿ ಅಗತ್ಯವಿದೆ. ಆದರೆ, ಆಯುಕ್ತರ ಕಚೇರಿ ಆರಂಭಿಸಿದರೆ ಹೆಚ್ಚುವರಿ ಸಿಬ್ಬಂದಿಗಳ ಅಗತ್ಯವಿರುತ್ತದೆ. ಎಲ್ಲವನ್ನು ನೋಡಿಕೊಂಡು ಈ ಬಗ್ಗೆ ತೀರ್ಮಾನ ಮಾಡುತ್ತೇವೆ. ಹಾಗೆಯೇ ಶಿವಮೊಗ್ಗದಲ್ಲಿ ಖಾಲಿ ಇರುವ ಪೊಲೀಸ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು ಎಂದು ಹೇಳಿದರು.