
ಬೆಂಗಳೂರು, ಫೆ. ೨೫- ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನಾವು ಸಿದ್ದರಿದ್ದೇವೆ. ಯುವಕರ ಸಮಸ್ಯೆಗಳ ಅರಿವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.
ಧಾರವಾಡದಲ್ಲಿ ನಿನ್ನೆ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ೩೫ ರಿಂದ ೪೦ ಸಾವಿರ ಹುದ್ದೆ ತುಂಬಿದ್ದೇವೆ. ಈಗ ಒಳ ಮೀಸಲಾತಿ ಸಮಸ್ಯೆ ಇದೆ. ಎಲ್ಲವನ್ನೂ ಸರಿಪಡಿಸಿಕೊಂಡು ಶೀಘ್ರದಲ್ಲೇ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದರು.
ರಾಜ್ಯ ಸರ್ಕಾರ ನೇಮಕಾತಿಗೆ ಸಂಬಂಧಿಸಿದಂತೆ ವಯೋಮಿತಿಯನ್ನು ಸಡಿಲ ಮಾಡಿದೆ. ನಾಳೆ ಸಚಿವ ಸಂಪುಟ ಸಭೆ ಇದ್ದು, ಈ ಸಭೆಯಲ್ಲಿ ನೇಮಕಾತಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ನೇಮಕಾತಿ ವಿಳಂಬಕ್ಕೆ ಆಗುತ್ತಿರುವ ಕಾನೂನು ತೊಡಕುಗಳು ಸೇರಿದಂತೆ ಎಲ್ಲದರ ಬಗ್ಗೆಯೂ ಚರ್ಚೆ ಆಗುತ್ತದೆ ಎಂದು ಅವರು ಹೇಳಿದರು.
ಈ ಹಿಂದೆ ವಿಪಕ್ಷದಲ್ಲಿದ್ದಾಗಲೂ ನಾವು ಯುವಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇವೆ. ನೇಮಕಾತಿಗೆ ಇರುವ ಗೊಂದಲಗಳನ್ನು ಸರಿಪಡಿಸಿಕೊಂಡು ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಹೇಳಿದರು.
ಒಳಮೀಸಲಾತಿ ಸ್ವಲ್ಪ ಸಮಸ್ಯೆ ಇದೆ. ನೇಮಕಾತಿ ಮಾಡಿಕೊಂಡರೆ ಕೆಲವರು ನ್ಯಾಯಾಲಯಕ್ಕೆ ಹೋಗಬಹುದು. ಹಾಗಾಗಿ ಎಲ್ಲದರ ಬಗ್ಗೆಯೂ ಚರ್ಚಿಸಿ ಹುದ್ದೆ ಭರ್ತಿ ತೀರ್ಮಾನಗಳನ್ನು ಮಾಡುತ್ತೇವೆ ಎಂದು ಅವರು ಹೇಳಿದರು.
ಬಿಜೆಪಿ ಅವಧಿಯಲ್ಲಿ ವಿಧಾನಸೌಧ ವ್ಯಾಪಾರ ಸೌಧವಾಗಿತ್ತು. ಎಷ್ಟು ಹಗರಣಗಳು ನಡೆದಿವೆ ಎಂಬುದು ಗೊತ್ತಿದೆ. ನಿನ್ನೆ ಧಾರವಾಡದಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಬಿಜೆಪಿಯವರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಒಂದೊಂದು ಹುದ್ದೆ ಎಷ್ಟಕ್ಕೆ ಮಾರಾಟ ಮಾಡಿದ್ದಾರೆ ಎಂಬುದು ಗೊತ್ತಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರು ಸಚಿವ ಸಂಪುಟ ಪುನರ್ ರಚನೆಗೆ ಆಗ್ರಹಿಸಿ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದೇನಿದ್ದರೂ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರು.



























