Home ಜಿಲ್ಲೆ ತುಮಕೂರು ನಾಳೆಯಿಂದ ಓದುಗರೇ ನಾಯಕರು ಅಂತಾರಾಷ್ಟ್ರೀಯ ಸಮ್ಮೇಳನ

ನಾಳೆಯಿಂದ ಓದುಗರೇ ನಾಯಕರು ಅಂತಾರಾಷ್ಟ್ರೀಯ ಸಮ್ಮೇಳನ

ತುಮಕೂರು, ಫೆ. ೨೫- ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ, ತುಮಕೂರು ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘ , ಎಲ್.ಐ.ಎಸ್ ಅಕಾಡೆಮಿ, ಬೆಂಗಳೂರು ಮತ್ತು ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಓದುಗರೇ ನಾಯಕರು ಎಂಬ ವಿಷಯದ ಕುರ್ತು ಅಂತಾರಾಷ್ಟ್ರೀಯ ಸಮ್ಮೇಳನವನ್ನು ನಗರದ ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯದ ಬಿರ್ಲಾ ಸಭಾಂಗಣದಲ್ಲಿ ಫೆ. ೨೬, ೨೭ ಮತ್ತು ೨೮ ರಂದು ಮೂರು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ರಾಜ್ಯ ಗ್ರಂಥಾಲಯದ ಸಂಘದ ಅಧ್ಯಕ್ಷ ಡಾ. ಎಸ್.ಎಲ್. ಕಾಡದೇವರ ಮಠ ತಿಳಿಸಿದರು.


ಈ ಸಮ್ಮೇಳನವು ಓದು ಸಂಸ್ಕೃತಿಯನ್ನು ಬೆಳೆಸುವಲ್ಲಿ ಗ್ರಂಥಾಲಯಗಳ ಪಾತ್ರವನ್ನು ತಿಳಿಸುವುದರ ಜತೆಗೆ ನಾಯಕತ್ವ ಅಭಿವೃದ್ಧಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಗ್ರಂಥಾಲಯಗಗಳು ಹೇಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ ಎಂಬುದರ ಬಗ್ಗೆ ಚರ್ಚೆ ನಡೆಸುವ ಸಂಬಂಧ ವೇದಿಕೆಯನ್ನು ಒದಗಿಸುವ ಉದ್ದೇಶ ಹೊಂದಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿಂದು ಹೇಳಿದರು.


ಮೂರು ದಿನಗಳ ಕಾಲ ನಡೆಯಲಿರುವ ಈ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ದೇಶ-ವಿದೇಶಗಳಿಂದ ಅತಿಥಿಗಳು, ಶಿಕ್ಷಣ ತಜ್ಞರು, ಗ್ರಂಥಾಲಯ, ಮಾಹಿತಿ ವಿಜ್ಞಾನ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.


ಫೆ. ೨೬ ರಂದು ಬೆಳಿಗ್ಗೆ ೧೦.೩೦ಕ್ಕೆ ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಕು. ಮಂಜುಶ್ರೀ ಎನ್. ಸಮ್ಮೇಳನ ಉದ್ಘಾಟಿಸುವರು. ಶಾಸಕ ಜಿ. ಬಿ. ಜ್ಯೋತಿಗಣೇಶ್ ಅವರು ಕರ್ನಾಟಕ ರಾಜ್ಯ ಗ್ರಂಥಪಾಲಕರ ಸಂಘದ ಅಂತರ್ಜಾಲವನ್ನು ಲೋಕಾರ್ಪಣೆ ಮಾಡುವರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತರಾದ ಬಸವರಾಜೇಂದ್ರ ಹೆಚ್. ಅವರು ಸಮ್ಮೇಳನದ “ಸ್ಮರ ಸಂಚಿಕೆಯನ್ನು” ನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.


ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ಖ್ಯಾತ ಪುಸ್ತಕ ಸಂಗ್ರಾಹಕರು ಹಾಗೂ ಪುಸ್ತಕ ಮನೆ ಗ್ರಂಥಾಲಯದ ಸ್ಥಾಪಕರಾದ ಲಂಕೇಗೌಡ ರವರನ್ನು ಸನ್ಮಾನಿಸಲಾಗುವುದು ಎಂದರು.


ಪ್ರಸಿದ್ಧ ವಾಗ್ಮಿ, ಕಥೆಗಾರರು ಹಾಗೂ ಲೇಖಕರಾದ ಡಾ. ಗುರುರಾಜ ಕರ್ಜಗಿ ಅವರು ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಭಾಗವಹಿಸಲಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ಗ್ರಂಥಾಲಯದ ಅಧ್ಯಕ್ಷರಾದ ಡಾ. ಎಸ್.ಎಲ್. ಕಾಡದೇವರಮಠ, ಎಲ್‌ಐಎಸ್ ಅಕಾಡೆಮಿಯ ಅಧ್ಯಕ್ಷ ಪ್ರೊ. ಪಿ.ವಿ. ಕೊಣ್ಣೂರ್, ಎಸ್‌ಐಟಿ ಸಿಇಓ ಡಾ. ಶಿವಕುಮಾರಯ್ಯ, ಪ್ರಾಂಶುಪಾಲರಾದ ಡಾ. ಎಸ್.ವಿ. ದಿನೇಶ್ ಉಪಸ್ಥಿತರಿರುವರು ಎಂದು ಅವರು ವಿವರಿಸಿದರು.


“ಓದುಗರೇ ನಾಯಕರು’ ಎಂಬ ಘೋಷವಾಕ್ಯದಡಿ ನಡೆಯಲಿರುವ ಈ ಅಂತಾರಾಷ್ಟ್ರೀಯ ಸಮ್ಮೇಳನವು ಓದು ಸಂಸ್ಕೃತಿ ಹಾಗೂ ಓದು ಸಂಸ್ಕೃತಿ ಬೆಳಸುವಲ್ಲಿ ಮತ್ತು ನಾಯಕತ್ವ ನಿರ್ಮಾಣದಲ್ಲಿ ಗ್ರಂಥಾಲಯಗಳ ಪಾತ್ರವನ್ನು ಸಮಗ್ರವಾಗಿ ಚರ್ಚಿಸಲು ಉದ್ದೇಶಿಸಿದೆ. ಈ ಸಮ್ಮೇಳನದಲ್ಲಿ ೫೦೦ಕ್ಕೂ ಹೆಚ್ಚು ಪ್ರತಿ ನಿಧಿಗಳು ಭಾಗವಹಿಸಲಿದ್ದು, ಅನೇಕ ಶಿಕ್ಷಣ ತಜ್ಞರು, ಗ್ರಂಥಪಾಲಕರು ಮತ್ತು ಗ್ರಂಥಾಲಯ ವಿಜ್ಞಾನಿಗಳು, ಸಂಶೋಧಕರು ಹಾಗೂವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.


ಫೆ. ೨೭ ರಂದು ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸಗಳು ನಡೆಯಲಿವೆ. ೨೮ ರಂದು ಮಧ್ಯಾಹ್ನ ೨.೩೦ಕ್ಕೆ ಸಮ್ಮೇಳನದ ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ. ದಿವ್ಯ ಸಾನ್ನಿಧ್ಯವನ್ನು ಸಿದ್ದಗಂಗಾ ಮಠದ ಕಿರಿಯಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹಾಗೂ ಪಾವಗಡದ ಶ್ರೀ ಜಪಾನಂದ ಜೀ ವಹಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ವಿ. ಸೋಮಣ್ಣ ಭಾಗವಹಿಸಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಶಾಸಕರಾದ ಬಿ.ಆರ್. ಪಾಟೀಲ್, ಸುರೇಶ್‌ಗೌಡ, ಡಾ. ಶೋಭ ಜಿ ಮತ್ತಿತರರು ಪಾಲ್ಗೊಳ್ಳುವರು. ಪ್ರೊ ಕೆ.ವಿ. ಕೊಣ್ಣೂರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.


ಎಲ್‌ಐಎಸ್ ಅಕಾಡೆಮಿ ಅಧ್ಯಕ್ಷ ಪ್ರೊ. ಪಿ.ವಿ. ಕೊಣ್ಣೂರು ಮಾತನಾಡಿ, ಗ್ರಂಥಾಲಯಗಳ ಏಳ್ಗೆಗಾಗಿ ಕೆಲಸ ಮಾಡುತ್ತಿದ್ದು, ಗ್ರಂಥಾಲಯಗಳಿಗೆ ಹೊಸತನ ತರುವ ಕಾರ್ಯದ ಜತೆಗೆ ಗ್ರಂಥಾಲಯಗಳಿಗೆ ವಿದ್ಯಾರ್ಥಿಗಳನ್ನು ಕರೆ ತರುವ ಪ್ರಯತ್ನದ ಭಾಗವಾಗಿ ಓದುಗರೇ ನಾಯಕರು ಎಂಬ ವಿಷಯ ಕುರಿತು ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಹೇಳಿದರು.


ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಓದು ಸಂಸ್ಕೃತಿಯನ್ನು ಬಲಪಡಿಸುವುದು ಮತ್ತು ಓದು ಸಂಸ್ಕೃತಿಯನ್ನು ವೃದ್ಧಿಪಡಿಸುವಲ್ಲಿ ಗ್ರಂಥಾಲಯಗಳ ಪಾತ್ರವನ್ನು ಜನರಿಗೆ ಪರಿಚಯಿಸುವುದು, ಸರ್ಕಾರ ಶಿಕ್ಷಣ ಸಂಸ್ಥೆಗಳು ಹಾಗೂ ಸಾಮಾಜಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಓದುವ ಅಭ್ಯಾಸ ಬೆಳೆಸುವ ಕಾರ್ಯತಂತ್ರ ರೂಪಿಸುವುದು. ಓದು ಮತ್ತು ನಾಯಕತ್ವದ ನಡುವಿನ ಸಂಬಂಧವನ್ನು ಬಲಪಡಿಸಿ ಜ್ಞಾನಾಧಾರಿತ ಸಮಾಜ ನಿರ್ಮಾಣದಲ್ಲಿ ಗ್ರಂಥಾಲಯಗಳ ಪಾತ್ರವನ್ನು ವಿವರಿಸುವುದು, ಸಮಾಜದಲ್ಲಿ ಗ್ರಂಥಾಲಯಗಳ ಮಹತ್ವದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವುದು ಗ್ರಂಥಾಲಯಗಳ ಅಭಿವೃದ್ಧಿಗೆ ರೂಪುರೇಷೆ ಸಿದ್ದಗೊಳ್ಳುವುದು, ಶಿಕ್ಷಣ ವ್ಯವಸ್ಥೆಯಲ್ಲಿ ಓದು ಸಂಸ್ಕೃತಿಗೆ ವಿಶೇಷ ಆದ್ಯತೆ ನೀಡುವ ಕಾರ್ಯ ಯೋಜನೆ ರೂಪಿಸುವುದು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ ಎಂದರು.