
ಕಲಬುರ್ಗಿ :ಫೆ.11: ಭಾರತದಲ್ಲಿ ತ್ರಿನೇತ್ರ ಶಕ್ತಿಯ ಏಕೈಕ ವೀರಭದ್ರದೇವರ ಅವತಾರವೆಂಬ ಖ್ಯಾತಿಗೆ ಭಾಜನವಾಗಿರುವ ಆಂಧ್ರಪ್ರದೇಶ ರಾಜ್ಯದ ಅನ್ನಮಯ್ಯ ಜಿಲ್ಲೆಯ ರಾಯಚೋಟಿ ಕ್ಷೇತ್ರದ ಶ್ರೀಭದ್ರಕಾಳಿ ಸಮೇತ ವೀರಭದ್ರದೇವರ 2026ರ ಬ್ರಹ್ಮೋತ್ಸವವು ಫೆ.13 ರಿಂದ 23ರವರೆಗೆ ಜರುಗಲಿದೆ.
ಬ್ರಹ್ಮೋತ್ಸವದ ಅಂಗವಾಗಿ ಶ್ರೀಮಹಾಗಣಪತಿ ಪೂಜೆ, ತ್ರಿಶೂಲ ಗ್ರಾಮೋತ್ಸವ, ಕಲ್ಯಾಣ ಉತ್ಸವ, ಮಯೂರ ವಾಹನೋತ್ಸವ, ಗಜವಾಹನೋತ್ಸವ, ಯಾಳಿ-ಸಿಂಹ ವಾಹನೋತ್ಸವ, ಹುಲಿ ಮತ್ತು ರಾವಣಬ್ರಹ್ಮ ವಾಹನೋತ್ಸವ, ನಂದಿವಾಹನೋತ್ಸವ, ಚೆಂಡಿ ಹೋಮ, ಪುಷ್ಪಯಾಗ, ಸೂರ್ಯಪ್ರಭ ಉತ್ಸವ, ವಸಂತೋತ್ಸವ, ಹಂಸವಾಹನೋತ್ಸವ, ಸರಸ್ವತಿ ಪೂಜೆ, ಅಶ್ವ ವಾಹನೋತ್ಸವ, ಪಲ್ಲಕ್ಕಿ ಉತ್ಸವ, ಉಯ್ಯಾಲೆ ಉತ್ಸವ ಸೇರಿ ಹಲವಾರು ಸನಾತನ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ಫೆ.19ರಂದು ಶ್ರೀವೀರಭದ್ರದೇವರು ಮತ್ತು ಶ್ರೀಭದ್ರಕಾಳಿ ಅಮ್ಮನವರಿಗೆ ಚಿನ್ನದ ಕಿರೀಟ ಧಾರಣೆ ನಡೆಯಲಿದೆ.
ಧರ್ಮಜಾಗೃತಿ ಸಮಾವೇಶ : ಫೆ.19 ರಂದು (ಗುರುವಾರ) ಸಂಜೆ 6 ಗಂಟೆಗೆ ದೇವಾಲಯದ ಆವರಣದಲ್ಲಿ ಕನ್ನಡ ಸಾಂಸ್ಕøತಿಕ ಸೇವಾ ಸಮಿತಿ ಹಮ್ಮಿಕೊಂಡಿರುವ ಧರ್ಮಜಾಗೃತಿ ಸಮಾವೇಶವನ್ನು ಆಂಧ್ರಪ್ರದೇಶ ಸಾರಿಗೆ ಮತು ಕ್ರೀಡಾ ಸಚಿವ ಮಂಡಿಪಲ್ಲಿ ರಾಮಪ್ರಸಾದರೆಡ್ಡಿ ಉದ್ಘಾಟಿಸುವರು. ರಾಜ್ಯದ ವಿಜಯಪೂರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಕರ್ನಾಟಕದ ಭಜನಾ ತಂಡಗಳಿ0ದ ಭಜನಾ ಕಾರ್ಯಕ್ರಮಗಳೂ ನಡೆಯಲಿವೆ.
ಮಹಾರಥೋತ್ಸವ : ಫೆ.20ರಂದು(ಶುಕ್ರವಾರ) ಸಾಯಂಕಾಲ 4.30 ಗಂಟೆಗೆ ವಿವಿಧ ಜನಪದ ವಾದ್ಯಮೇಳಗಳೊಂದಿಗೆ ಶ್ರೀಭದ್ರಕಾಳಿ ಸಮೇತ ವೀರಭದ್ರದೇವರ ವಾರ್ಷಿಕ ಮಹಾರಥೋತ್ಸವವು ರಾಯಚೋಟಿ ನಗರದ ಎಲ್ಲ ಪ್ರಮುಖ ಬೀದಿಗಳಲ್ಲಿ ಜರುಗಲಿದೆ. ಇದೇ ದಿನ ಪ್ರಾತಃಕಾಲ 4 ಗಂಟೆಗೆ ಅಗ್ನಿಕುಂಡ ಪ್ರವೇಶ, ಮುಂಜಾನೆ 11.45ರ ಶುಭ ಮುಹೂರ್ತದಲ್ಲಿ ಶ್ರೀವೀರಭದ್ರದೇವರಿಗೆ ವಜ್ರದ ತ್ರಿನೇತ್ರ ಧಾರಣೆ ಹಾಗೂ ಮಹಾನೈವೇದ್ಯ ನಡೆಯಲಿದೆ.
ನಿರಂತರ ದಾಸೋಹ : ವಿಶೇಷವಾಗಿ ಕರ್ನಾಟಕ ರಾಜ್ಯದ ಬಹುಪಾಲು ಜಿಲ್ಲೆಗಳಿಂದ ಆಗಮಿಸುವ ಅಸಂಖ್ಯಾತ ಭಕ್ತ ಸಮೂಹಕ್ಕೆ ನಿರಂತರ ದಾಸೋಹ ಸೇವೆಯಲ್ಲಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಸಿ.ಎಂ. ಶಿವಶರಣಪ್ಪ ಕಲಬುರ್ಗಿ ಹಾಗೂ ಸೇವಾ ಸಮಿತಿ ಕಾರ್ಯದರ್ಶಿ ರುದ್ರಗೌಡ ಸೊಲಬಗೌಡ್ರ ಬಂಡಿ ಅವರು ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



























