
ಕಲಬುರಗಿ: ಪತ್ನಿ ರತ್ನಾವಲಿಯ ಮೇಲಿನ ಅಪಾರ ಪ್ರೀತಿಯೇ ಸಂತಕವಿ ತುಳಸಿದಾಸರ ಬದುಕಿನಲ್ಲಿ ಮಹತ್ವದ ತಿರುವಿಗೆ ಕಾರಣವಾಗಿ, ಅವರನ್ನು ಲೋಕಾಸಕ್ತಿಯಿಂದ ರಾಮಭಕ್ತಿಯತ್ತ ಕೊಂಡೊಯ್ದಿತು ಎಂದು ಅಧ್ಯಕ್ಷತೆ ವಹಿಸಿದ್ದ ಡಾ. ದಯಾನಂದ ಶಾಸ್ತ್ರಿ ಹೇಳಿದರು.
ನಗರದ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಹಿಂದಿ ವಿಭಾಗದ ವತಿಯಿಂದ ಸೋಮವಾರ ರಂದು ಹಮ್ಮಿಕೊಂಡಿದ್ದ ತುಳಸಿದಾಸರ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ದಯಾನಂದ ಎಂ. ಶಾಸ್ತ್ರಿ ಅವರು, ರತ್ನಾವಲಿಯ ಮಾತುಗಳಿಂದ ಆತ್ಮಜಾಗೃತಿಗೊಂಡ ತುಳಸಿದಾಸರು ತಮ್ಮ ಬದುಕನ್ನು ಶ್ರೀರಾಮನ ಭಕ್ತಿಗೆ ಸಮರ್ಪಿಸಿಕೊಂಡರು. ಅವರ ಭಕ್ತಿ, ಅಧ್ಯಾತ್ಮಚಿಂತನೆ ಮತ್ತು ಜನಪರ ದೃಷ್ಟಿಕೋನದ ಫಲವಾಗಿ ರಾಮಚರಿತಮಾನಸದಂತಹ ಮಹತ್ವದ ಕೃತಿ ರೂಪುಗೊಂಡಿತು. ಸಂಸ್ಕøತದ ರಾಮಕಥೆಯನ್ನು ಜನಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವಂತೆ ಸರಳವಾದ ಅವಧಿ ಭಾಷೆಯಲ್ಲಿ ‘ರಾಮಚರಿತಮಾನಸ’ ಕೃತಿಯನ್ನು ರಚಿಸುವ ಮೂಲಕ ತುಳಸಿದಾಸರು ರಾಮಭಕ್ತಿಯನ್ನು ಜನಮಾನಸಕ್ಕೆ ತಲುಪಿಸಿದರು. ಮುಂದುವರಿದು ರತ್ನಾವಲಿಯ ಮೇಲಿನ ದಾಂಪತ್ಯ ಪ್ರೀತಿಯು ತುಳಸಿದಾಸರ ಬದುಕಿನಲ್ಲಿ ಕೇವಲ ವೈಯಕ್ತಿಕ ಭಾವನೆಯಾಗಿ ಉಳಿಯದೆ, ಆತ್ಮಪರಿವರ್ತನೆಗೆ ಕಾರಣವಾಯಿತು. ಆ ಪರಿವರ್ತನೆಯೇ ಅವರಲ್ಲಿ ರಾಮನ ಮೇಲಿನ ಅಚಲ ಭಕ್ತಿಯನ್ನು ಬೆಳೆಸಿತು. ಹೀಗಾಗಿ ರತ್ನಾವಲಿಯ ಪ್ರಸಂಗವು ತುಳಸಿದಾಸರ ಜೀವನದಲ್ಲಿ ಪ್ರೀತಿ, ಆತ್ಮಜಾಗೃತಿ ಮತ್ತು ಭಕ್ತಿಯ ನಡುವಿನ ಸಂಬಂಧವನ್ನು ಪ್ರತಿಬಿಂಬಿಸುವ ಮಹತ್ವದ ಘಟನೆಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗೋವಿಂದ ಪೂಜಾರ್ ರವರು ತುಳಸಿದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಪೂರ್ವ ರವೀಂದ್ರ ಪಾಟೀಲ್ ನಿರೂಪಿಸಿದರು, ಕೇದಾರ ವಂದಿಸಿದರು.































